ಮಡಿಕೇರಿ, ಜು.೨೪: ಕೊಡಗು ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಆಚರಣೆಗಳಲ್ಲಿ ‘ಕಕ್ಕಡ ನಮ್ಮೆ’ಗೆ ವಿಶೇಷ ಸ್ಥಾನವಿದೆ. ಮಳೆಗಾಲದ ಕಕ್ಕಡ ತಿಂಗಳಲ್ಲಿ ಆರೋಗ್ಯವರ್ಧಕ ಆಹಾರ ಸೇವನೆ, ಔಷಧೀಯ ಗುಣಗಳಿರುವ ಸಾಂಪ್ರದಾಯಿಕ ತಿನಿಸುಗಳ ತಯಾರಿಕೆ ಹಾಗೂ ಸಮುದಾಯದ ಒಗ್ಗಟ್ಟನ್ನು ಬಿಂಬಿಸುವ ಆಚರಣೆಗಳು ಶತಮಾನಗಳಿಂದ ನಡೆದುಕೊಂಡು ಬಂದಿವೆ.

ಈ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಮಡಿಕೇರಿ ಕೊಡವ ಸಮಾಜ, ಮಡಿಕೇರಿ ಪೊಮ್ಮಕ್ಕಡ ಒಕ್ಕೂಟ ಹಾಗೂ ಮಡಿಕೇರಿಯ ಎಲ್ಲಾ ಕೊಡವ ಕೇರಿಗಳ ಸಂಯುಕ್ತ ಆಶ್ರಯದಲ್ಲಿ “ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ-೨೦೨೬” ಕಾರ್ಯಕ್ರಮವನ್ನು ಆಗಸ್ಟ್ ೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ.

ಕಕ್ಕಡ ತಿಂಗಳಲ್ಲಿ ಸೇವಿಸುವ ಆಹಾರ ಪದ್ಧತಿ ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಕಾಡಿನ ಔಷಧೀಯ ಸಸ್ಯಗಳು, ಸ್ಥಳೀಯ ಪದಾರ್ಥಗಳು ಹಾಗೂ ಪಾರಂಪರಿಕ ಅಡುಗೆ ವಿಧಾನಗಳಿಂದ ತಯಾರಾಗುವ ತಿನಿಸುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಕಕ್ಕಡ ತೀನಿ ಪೈಪೋಟಿ’ ಆಯೋಜಿಸಲಾಗಿದ್ದು, ಸಾಂಪ್ರದಾಯಿಕ ಅಡುಗೆ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ.

ಸ್ಪರ್ಧೆಯಲ್ಲಿ ಮದ್ದ್ ಪಾಯಸ, ಮದ್ದ್ ನೀರಿನಿಂದ ತಯಾರಿಸುವ ಮದ್ದ್ ಪುಟ್ಟ್, ವಿವಿಧ ಸಾಂಪ್ರದಾಯಿಕ ಸಸ್ಯಾಹಾರಿ ತಿನಿಸುಗಳು, ನಾಡ್ ಕುಮ್ ಕರಿ, ಞಂಡ್ ಕರಿ, ನಾಡ್ ಕೋಳಿ ಕರಿ ಸೇರಿದಂತೆ ಪಾರಂಪರಿಕ ಮಾಂಸಾಹಾರ ಖಾದ್ಯಗಳು ಹಾಗೂ ಕೂವೆಲೆ ಪುಟ್ಟ್, ಚಿಟ್ಟಣಿ ಪುಟ್ಟ್ ಮೊದಲಾದ ವಿಶೇಷ ತಿನಿಸುಗಳನ್ನು ಸ್ಪರ್ಧಿಗಳು ಸಿದ್ಧಪಡಿಸಲಿದ್ದಾರೆ. ಇದರ ಮೂಲಕ ಮರೆಯಾಗುತ್ತಿರುವ ಕೊಡವ ಅಡುಗೆ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆಯಲಿದೆ.

ಆಹಾರ ಸ್ಪರ್ಧೆಗಳ ಜೊತೆಗೆ ಕೊಡವ ಸಂಪ್ರದಾಯದ ಪ್ರಮುಖ ಅಂಗವಾದ ವಿವಿಧ ಕಳಿ ಪೈಪೋಟಿಗಳು ಹಾಗೂ ಸಾಂಪ್ರದಾಯಿಕ ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿ ಅನಾವರಣಗೊಳ್ಳಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳಪ್ಪ ವಹಿಸಲಿದ್ದಾರೆ. ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಗ್ರೀಷ್ಮ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಪೆಮ್ಮಚಂಡ ವಿನಿತ ದೇವಮ್ಮ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. -ಪುತ್ತರಿರ ಕರುಣ್ ಕಾಳಯ್ಯ