ಐಗೂರು, ಜು. ೨೨: ಐಗೂರು ಗ್ರಾಮಕ್ಕೆ ಸ್ಮಶಾನ ಕಲ್ಪಿಸುವ ನಿಟ್ಟಿನಲ್ಲಿ ಜಾಗ ಗುರುತಿಸುವಂತೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು.

‘ಸ್ಮಶಾನವಿಲ್ಲದ ಐಗೂರು - ಅಂತ್ಯಕ್ರಿಯೆಗೆ ಪರಗ್ರಾಮದ ಮೊರೆ’ ಎಂಬ ಶೀರ್ಷಿಕೆಯಡಿ ಏ. ೨೫ ರಂದು ಶಕ್ತಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಬಳಿಕ ಗ್ರಾಮಸ್ಥರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರನ್ನು ಭೇಟಿ ಮಾಡಿ, ಗ್ರಾಮದಲ್ಲಿ ಶಾಶ್ವತ ಸ್ಮಶಾನ ಇಲ್ಲದ ಕಾರಣ ಮೃತದೇಹಗಳನ್ನು ದೂರದ ಕಿರುಗಂದೂರು ಗ್ರಾಮಕ್ಕೆ ಸಾಗಿಸಬೇಕಾದ ಅನಿವಾರ್ಯತೆ ಎದುರಾಗುತ್ತಿರುವ ಬಗ್ಗೆ ಮನವರಿಕೆ ಮಾಡಿದ್ದರು. ಐಗೂರಿನ ನೂತನ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾಜೂರು ಪರ್ಯಾಯ ರಸ್ತೆಯ ಮೂಲಕ ಸುಮಾರು ೬ ಕಿ.ಮೀ. ಹೆಚ್ಚುವರಿ ಸುತ್ತು ಬಳಸಿ ಮೃತದೇಹ ಸಾಗಿಸಬೇಕಾದ ಸಂಕಷ್ಟವನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಶಾಸಕ ಡಾ. ಮಂತರ್‌ಗೌಡ ಅವರು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಐಗೂರು ಗ್ರಾಮಕ್ಕೆ ಶಾಶ್ವತ ಸ್ಮಶಾನ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ಗುರುತಿಸುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವAತೆ ಸೂಚಿಸಿದ್ದರು. ನಂತರ ಶಾಸಕರ ಶಿಫಾರಸು ಪತ್ರದೊಂದಿಗೆ ಗ್ರಾಮಸ್ಥರು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ, ಶಾಶ್ವತ ಸ್ಮಶಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದರು.

ಈ ಸಂದರ್ಭ ಕೆಡಿಪಿ ಸದಸ್ಯೆ ಸಬಿತಾ ಚೆನ್ನಕೇಶವ, ಧರ್ಮಪ್ಪ, ಸುಕುಮಾರ್, ಗೀತಾ ಆನಂದ, ರೂಪ ದಾಮೋದರ, ಕಮಲ, ರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.