ಸುಂಟಿಕೊಪ್ಪ, ಜು. ೨೨: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸುಂಟಿಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶೇಷಚೇತನರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಉದ್ಘಾಟಿಸಿ ಮಾತನಾಡಿ, ವಿಶೇಷಚೇತನರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಮಹತ್ವದ ಸಮಾಜಮುಖಿ ಕಾರ್ಯಕ್ರಮವಾಗಿದೆ. ಇಂತಹ ಶಿಬಿರಗಳ ಮೂಲಕ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮುದಾಯ ವೈದ್ಯಶಾಸ್ತç ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಕಾಮತ್ ಮಾತನಾಡಿ, ವಿಶೇಷಚೇತನರು ಸಮಾಜದ ಸಮಾನ ಸದಸ್ಯರಾಗಿದ್ದು, ಅವರಿಗೆ ಸೂಕ್ತ ಅವಕಾಶ, ಬೆಂಬಲ ಹಾಗೂ ಪ್ರೋತ್ಸಾಹ ದೊರೆತರೆ ಶಿಕ್ಷಣ, ಕ್ರೀಡೆ, ಕಲೆ, ವಿಜ್ಞಾನ ಮತ್ತು ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವೆಂದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ಮಾತನಾಡಿ, ವಿಶೇಷಚೇತನರು ದೈನಂದಿನ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅವರಿಗೆ ಶಿಕ್ಷಣ, ಸಮಾನ ಅವಕಾಶ, ಗೌರವಯುತ ಬದುಕಿನ ಹಕ್ಕು, ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಾ. ದಿವ್ಯಶ್ರೀ, ಡಾ. ಬಸವರಾಜ್, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಹಾಗೂ ಸುಂಟಿಕೊಪ್ಪ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಾಣಿ, ಲೋಕೇಶ್, ಕವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಬಿರದಲ್ಲಿ ೭೫ಕ್ಕೂ ಅಧಿಕ ವಿಶೇಷಚೇತನರು ಆರೋಗ್ಯ ತಪಾಸಣೆ ಮತ್ತು ವಿವಿಧ ವೈದ್ಯಕೀಯ ಸೇವೆಗಳ ಪ್ರಯೋಜನ ಪಡೆದುಕೊಂಡರು.