ಮಡಿಕೇರಿ, ಜು. ೨೨: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಬಡಾವಣೆ ನಿರ್ಮಾಣ ವಾಗುತ್ತಿದೆ ಎಂದು ಆರೋಪಿಸಿ ಅದನ್ನು ವಿರೋಧಿಸಿ ಕೊಡಗು ಕಾವೇರಿ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ನೇತೃತ್ವದಲ್ಲಿ ಕೆ. ನಿಡುಗಣೆಯ ಬಡಾವಣೆ ಜಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬಡಾವಣೆ ಯೋಜನೆ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿ.ಪಿ. ಮುತ್ತಣ್ಣ, ಕೆ. ನಿಡುಗಣೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೯೪ ಎಕರೆ ಜಾಗವನ್ನು ಭೂ ಪರಿವರ್ತನೆ ಮಾಡಿ ಸುಮಾರು ೧೨೧೨ ನಿವೇಶನಗಳ ನಿರ್ಮಾಣಕ್ಕಾಗಿ ಸುಮಾರು ೧೫೦೦ ಮರಗಳನ್ನು ಕಡಿಯಲಾಗಿದೆ ಎಂದರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡ ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ಮಾತನಾಡಿ, ಈಗಾಗಲೇ ಈ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಸುಮಾರು ೧೪೦೦ ಮರಗಳನ್ನು ಕಡಿಯಲಾಗಿದ್ದು, ಇದನ್ನು ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಮತ್ತು ತಕ್ಷಣವೇ ಈ ಯೋಜನೆಯನ್ನು ಕೈಬಿಡಬೇಕು ಎಂದರು.
ಪ್ರತಿಭಟನೆಯಲ್ಲಿ ಕೊಡಗು ಕಾವೇರಿ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಕೊಡಗು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಕೆಲ ಸ್ಥಳೀಯರು ಪಾಲ್ಗೊಂಡಿದ್ದರು.