ಮುಳ್ಳೂರು, ಜು. ೨೨: ಶನಿವಾರಸಂತೆ ಹೋಬಳಿಯಲ್ಲಿ ಕಾಡಾನೆ ಹಾವಳಿಯ ಜೊತೆಯಲ್ಲಿ ಕೆಲವು ದಿನಗಳಿಂದ ಚಿರತೆ ಹಾವಳಿಯೂ ಹೆಚ್ಚಾಗಿದೆ. ಶನಿವಾರಸಂತೆ ವ್ಯಾಪ್ತಿಯ ದುಂಡಳ್ಳಿ ಮುಂತಾದ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದರೆ, ಮುಳ್ಳೂರು ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಹೆಚ್ಚಾಗಿದೆ. ಕೆಲವು ದಿನಗಳಿಂದ ಆಲೂರು-ಸಿದ್ದಾಪುರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ವೇಳೆಯಲ್ಲಿ ಚಿರತೆ, ಸಾಕಿದ ನಾಯಿ, ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ಕರುಗಳನ್ನು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಆಲೂರು-ಸಿದ್ದಾಪುರ ವ್ಯಾಪ್ತಿಯ ಆಲೂರು, ಮಾಲಂಬಿ ಮತ್ತು ಹೊಸಗುತ್ತಿ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಮಾಲಂಬಿ ಗ್ರಾಮದಲ್ಲಿ ಮೊನ್ನೆಯಷ್ಟೇ ರಾತ್ರಿ ಗ್ರಾಮಸ್ಥರೊಬ್ಬರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಎಳೆದುಕೊಂಡು ಹೋದ ಬೆನ್ನಲ್ಲೆ ಬುಧವಾರ ಮುಂಜಾನೆ ೩ ಗಂಟೆ ಸಮಯದಲ್ಲಿ ಹೊಸಗುತ್ತಿ ಗ್ರಾಮದ ಅರುಣ್ ಎಂಬವರ ಮನೆಯ ಹತ್ತಿರ ಬಂದ ಚಿರತೆ ಅವರ ಸಾಕು ನಾಯಿಯನ್ನು ಹೊಂಚು ಹಾಕಿ ಎಳೆದುಕೊಂಡು ಹೋಗಿದ್ದು, ಈ ದೃಶ್ಯ ಅರುಣ್ ಮನೆ ಮುಂಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.