ಶನಿವಾರಸಂತೆ, ಜು. ೨೧: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ “ಸಂಭ್ರಮ ಶನಿವಾರ’’ ಕಾರ್ಯಕ್ರಮದ ಅಂಗವಾಗಿ ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ಮತ್ತು ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದ ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್‌ಐ ಹೆಚ್.ವೈ.ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನದಿಂದ ಹಾಗೂ ಮೊಬೈಲ್ ಬಳಕೆಯಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಿ.ನರಸಿಂಹ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ-ದೈಹಿಕ ಆರೋಗ್ಯಕ್ಕೆ ಮಾರಕವಾದ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ೮೫ ವಿದ್ಯಾರ್ಥಿಗಳಿಂದ ಮಾದಕ ವ್ಯಸನ ವಿರೋಧಿ ಘೋಷವಾಕ್ಯ ಬರವಣಿಗೆ, ಪೋಸ್ಟರ್ ಪ್ರದರ್ಶನ, ಜಾಗೃತಿ ಭಾಷಣ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮಗಳು ನಡೆದವು.ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಿದರು. ಶಿಕ್ಷಕ ಸಿ.ಆರ್.ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.ಶಿಕ್ಷಕಿ ಭವಾನಿ ಕಾರ್ಯಕ್ರಮ ನಿರ್ವಹಿಸಿದರು.