ವೀರಾಜಪೇಟೆ, ಜು. ೨೧: ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಾಜಪೇಟೆಯ ಪೂಮಾಲೆ ಮಂದ್ಗೆ ಧಾರ್ಮಿಕ ಉದ್ದೇಶಕ್ಕಾಗಿ ನೀಡಲಾಗಿರುವ ಜಾಗದಲ್ಲಿ ಅನ್ಯಚಟುವಟಿಕೆ ನಡೆಸಲು ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸಲಾಗುವುದು ಎಂದು ಸುತ್ತಮುತ್ತಲಿನ ಕೊಡವ ಸಮುದಾಯದ ಪ್ರಮುಖರು ತಿಳಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರಾಯಿರನಾಡು ಗ್ರಾಮಸ್ಥರ ಪರವಾಗಿ ಮಾತನಾಡಿದ ಮಾಳೇಟಿರ ಕಾಳಯ್ಯ ಹಾಗೂ ಇತರರು ಈ ಬಗ್ಗೆ ಮಾಹಿತಿ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ಬರುವ ಪೂಮಾಲೆ ಮಂದ್ಗೆ ಈಶ್ವರ ದೇವರ ಹೆಸರಿನಲ್ಲಿ ಕೊಡವರ ಆಚಾರ, ವಿಚಾರ, ಪದ್ದತಿ ಪರಂಪರೆಯನ್ನು ಬಿಂಬಿಸಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ತಾತಂಡ ಕುಟುಂಬದವರು ಉದಾರವಾಗಿ ಜಾಗ ದಾನ ನೀಡಿದ್ದಾರೆ. ಪ್ರತಿವರ್ಷ ಹುತ್ತರಿ ಹಬ್ಬದ ಸಮಯದಲ್ಲಿ ಆರ್ಜಿ, ಬೇಟೋಳಿ, ಬಿಟ್ಟಂಗಾಲ, ಮಗ್ಗುಲ, ಐಮಂಗಲ, ಕುಕ್ಲೂರು, ದೇವಣಗೇರಿ, ಚೆಂಬೆಬೆಳ್ಳೂರು ಗ್ರಾಮಸ್ಥರುಗಳು ಸೇರಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಜಾಗ ಇದಾಗಿದೆ. ಅಲ್ಲದೆ ರಾಜ್ಯ ಸರ್ಕಾರದಿಂದ ಬಂದಿರುವ ೧೦ ಲಕ್ಷ ಹಣದಲ್ಲಿ ಸಮುದಾಯ ಭವನವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಅದರ ಒತ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಬಳಕೆ-ಅನ್ಯ ಚಟುವಟಿಕೆಗೆ ನೀಡುವ, ಬಳಸುವ ಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸಲಾಗುವುದು ಎಂದು ತಿಳಿಸಿದರು.
ಕುಕ್ಲೂರು ಭದ್ರಕಾಳಿ ದೇವಾಲಯದ ಅಧ್ಯಕ್ಷ ಮಾಳೇಟಿರ ಬಾಲ ಚಿಣ್ಣಪ್ಪ ಮಾತನಾಡಿ, ಪೂಮಾಲೆ ಮಂದ್ಗೆ ತನ್ನದೇ ಆದ ಹಿನ್ನೆಲೆ ಇದ್ದು ಧಾರ್ಮಿಕತೆಯ ಕೇಂದ್ರವೂ ಆಗಿದೆ. ಹೆಗ್ಗಳದ ಈಶ್ವರ ದೇವಾಲಯದಿಂದ ಸ್ಥಾಪಿತವಾದ ಶಿವಲಿಂಗ ಇದ್ದು ವಾರ್ಷಿಕ ಉತ್ಸವ ನಡೆಯುತ್ತದೆ. ಕುಕ್ಲೂರು ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವದ ಸಮಯದಲ್ಲಿ ಪೂಜೆ ಪುನಸ್ಕಾರ ಮತ್ತು ಹುತ್ತರಿ ಹಬ್ಬದ ವೇಳೆ ಕೋಲಾಟ ನಡೆÀಯುತ್ತದೆ.
ಈ ಮಂದ್ ಕೊಡವರಿಗೆ ಪವಿತ್ರ ಸ್ಥಳವಾಗಿದ್ದು ಕೊಡವ ಸಂಸ್ಕೃತಿ ಅಚಾರ ಪದ್ದತಿ ಪರಂಪರೆಯನ್ನು ಬಿಂಬಿಸುವ ಈ ಸ್ಥಳವನ್ನು ವಾಣಿಜ್ಯ ಬಳಕೆಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ತಾತಂಡ ಕುಟುಂಬದ ಅಧ್ಯಕ್ಷ ಟಾಟ ಅಪ್ಪಣ್ಣ ಮಾತನಾಡಿ ಸಮುದಾಯ ಭವನಕ್ಕೆ ಸರಕಾರದಿಂದ ರೂ. ೧೦ ಲಕ್ಷ ನೀಡಿದ ಹಿನ್ನೆಲೆಯಲ್ಲಿ ಸಮುದಾಯ ಭವನ ನಿರ್ಮಾಣವಾಗಿದೆ. ಇದನ್ನು ಇದೀಗ ಪಾರ್ಟಿ ಹಾಲ್ ಆಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಈ ಭವನದ ಹಿಂದೆ ಹಾಗೂ ಮುಂದೆ ಪಾರ್ಟಿ ಹಾಲ್ಗೆ ಅಗತ್ಯವಿರುವ ಕಾಮಗಾರಿ ನಡೆಸಲಾಗುತ್ತಿದೆ. ಇದು ಸರಿಯಲ್ಲ. ತಾತಂಡ ಕುಟುಂಬಸ್ಥರು ಕೊಡವರ ಪದ್ದತಿ ಪರಂಪರೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಜಾಗವನ್ನು ದಾನ ನೀಡಿದ್ದಾರೆ. ಇಲ್ಲಿ ಸುತ್ತಲೂ ಸಾಕಷ್ಟು ವಸತಿಗಳು ಇದ್ದು ಜನರ ಭಾವನೆಗಳಿಗೂ ದೈನಂದಿನ ಕೆಲಸ ಕಾರ್ಯಕ್ಕೂ ಧಕ್ಕೆಯಾಗಲಿದೆ. ಈ ಮಂದ್ ಗೆ ೯ ಗ್ರಾಮಗಳು ಸೇರಲಿದ್ದು ಅಲ್ಲಿನ ಎಲ್ಲಾ ಕೊಡವ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರವಾಗಿದೆ. ಮಂದ್ನ ಆಡಳಿತ ಮಂಡಳಿ ಏಕಪಕ್ಷೀಯವಾಗಿ ಈ ನಿರ್ಧಾರ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಈ ಹಿನ್ನೆಲೆ ವೀರಾಜಪೇಟೆ ಕ್ಷೇತ್ರದ ಶಾಸಕರಿಗೆ, ಅಖಿಲ ಕೊಡವ ಸಮಾಜ, ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಗೆ ಈ ಕುರಿತು ಮನವಿ ಸಲ್ಲಿಸುತ್ತೇವೆ ಅಲ್ಲದೆ ಪುರಸಭೆ ಮುಖ್ಯಾಧಿಕಾರಿ ಈ ಜಾಗದಲ್ಲಿ ಯಾವ ವಾಣಿಜ್ಯ ಬಳಕೆಗೆ ಅನುಮತಿ ಪತ್ರ ನೀಡದಂತೆ ಕೋರುತ್ತೇವೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕುಕ್ಲೂರು ಭದ್ರಕಾಳಿ ದೇವಾಲಯ ಸಮಿತಿ ಕಾರ್ಯದರ್ಶಿ ತಾತಂಡ ಬಿಪಿನ್ ಕಾವೇರಪ್ಪ, ಸ್ಥಳಿಯ ನಿವಾಸಿ ಮುಕ್ಕಾಟಿರ ಅಚ್ಚಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.