ಗೋಣಿಕೊಪ್ಪಲು, ಜು. ೨೧: ಅಮ್ಮತ್ತಿ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪೊರ್ಕೊಂಡ ಯು. ಬೋಪಣ್ಣ, ಕಾರ್ಯದರ್ಶಿಯಾಗಿ ನೆಲ್ಲಮಕ್ಕಡ ತಿಮ್ಮಯ್ಯ ಹಾಗೂ ಖಜಾಂಚಿಯಾಗಿ ಕೋಡಿರ ದಿನೇಶ್ ಅಧಿಕಾರ ಸ್ವೀಕರಿಸಿದರು. ಪಿ. ಬೋಸ್ ಪೆಮ್ಮಯ್ಯ (ಎಂಜೆಎಫ್) ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಪೊರ್ಕೊಂಡ ಯು. ಬೋಪಣ್ಣ, ಎಲ್ಲಾ ಸದಸ್ಯರ ಸಹಕಾರ ಮತ್ತು ಒಗ್ಗಟ್ಟಿನೊಂದಿಗೆ ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿ ಹಲವು ಗುರಿಗಳನ್ನು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಕ್ಲಬ್ ಪ್ರಮುಖ ಬೋಸ್ ಪೆಮ್ಮಯ್ಯ ಮಾತನಾಡಿ, ಲಯನ್ಸ್ ಕ್ಲಬ್ ಸಮಾಜಮುಖಿ ಸೇವೆಗಳ ಮೂಲಕ ಜನರ ಬದುಕಿನಲ್ಲಿ ಬೆಳಕು ಮೂಡಿಸುತ್ತಿದೆ. ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ನೆರವು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ಲಬ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ಪೂಣಚ್ಚ ಮಾತನಾಡಿ, ಕಳೆದ ಅವಧಿಯಲ್ಲಿ ಸದಸ್ಯರ ಸಹಕಾರದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ನೂತನ ಆಡಳಿತ ಮಂಡಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಸೂರಜ್ ಕಾರ್ಯಪ್ಪ, ಪ್ರಾಂತೀಯ ಅಧ್ಯಕ್ಷ ಮನ್ನಕಮನೆ ಬಾಲಕೃಷ್ಣ, ಗೋಣಿಕೊಪ್ಪ ವಲಯ ಅಧ್ಯಕ್ಷ ಕೆ.ಪಿ. ಅಚ್ಚಯ್ಯ, ಹಿರಿಯ ಸದಸ್ಯರಾದ ಜಮ್ಮಡ ಮೋಹನ್, ಪಟ್ಟಡ ಧನು ಉತ್ತಯ್ಯ, ಡಾ. ಚಿಣ್ಣಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅಮ್ಮತ್ತಿ ಕೊಡವ ಸಮಾಜಕ್ಕೆ ಎರಡು ಕೂಲರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ವಿವಿಧ ಭಾಗಗಳಿಂದ ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು. ಕುಟ್ಟಂಡ ರೀಟಾ ಚಿಣ್ಣಪ್ಪ ಪ್ರಾರ್ಥಿಸಿ, ಸೋಮೆಯಂಡ ಎಸ್. ಪೂಣಚ್ಚ ಸ್ವಾಗತಿಸಿ, ನೂತನ ಕಾರ್ಯದರ್ಶಿ ನೆಲ್ಲಮಕ್ಕಡ ತಿಮ್ಮಯ್ಯ ವಂದಿಸಿದರು.