ಚೆಟ್ಟಳ್ಳಿ, ಜು. ೨೦: ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಶಾಲೆಗಳಿಗೂ ಆಧುನಿಕ ಡಿಜಿಟಲ್ ಕಲಿಕಾ ವ್ಯವಸ್ಥೆಯನ್ನು ತಲುಪಿಸುವ ಮಹತ್ವದ ಹೆಜ್ಜೆಯನ್ನು ಅರಣ್ಯ ಇಲಾಖೆ ಇಟ್ಟಿದೆ. ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿರುವ ಇಂಟರಾಕ್ಟಿವ್ ಪ್ಯಾನೆಲ್ (ಡಿಜಿಟಲ್ ಸ್ಮಾರ್ಟ್ ಬೋರ್ಡ್) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹೊಸ ಆಶಾಕಿರಣವಾಗಿದೆ.
ಅರಣ್ಯ ಸಂರಕ್ಷಣೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತಿರುವ ಅರಣ್ಯ ಇಲಾಖೆ, ಶಿಕ್ಷಣ ಕ್ಷೇತ್ರದಲ್ಲೂ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಅವರು ಕೊಡಗು ಪ್ರವಾಸದ ಸಂದರ್ಭದಲ್ಲಿ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಿದ್ದರು.
ಬಳಿಕ ಅರಣ್ಯ ಇಲಾಖೆಯ ಅನುದಾನದಲ್ಲಿ ಶಾಲೆಯಲ್ಲಿ ಇಂಟರಾಕ್ಟಿವ್ ಪ್ಯಾನೆಲ್ ಅಳವಡಿಕೆ ಪೂರ್ಣಗೊಂಡಿದ್ದು, ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳ ಮಟ್ಟದ ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಇಂಟರಾಕ್ಟಿವ್ ಪ್ಯಾನೆಲ್ ಅಥವಾ ಡಿಜಿಟಲ್ ಸ್ಮಾರ್ಟ್ ಬೋರ್ಡ್ ೪ ಏ ರೆಸಲ್ಯೂಶನ್ ಹೊಂದಿರುವ ಆಧುನಿಕ ಟಚ್‌ಸ್ಕಿçÃನ್ ಸಾಧನವಾಗಿದೆ. ಶಿಕ್ಷಕರು ಇದರಲ್ಲಿ ನೇರವಾಗಿ ಬರೆಯಬಹುದು, ಚಿತ್ರಗಳು, ನಕ್ಷೆಗಳು, ವೀಡಿಯೋಗಳು ಹಾಗೂ ಅನಿಮೇಷನ್‌ಗಳ ಮೂಲಕ ಪಾಠ ಬೋಧಿಸಬಹುದು. ಇಂಟರ್ನೆಟ್ ಸಂಪರ್ಕದ ಮೂಲಕ ಜಾಗತಿಕ ಶೈಕ್ಷಣಿಕ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅವಕಾಶ ಇದರಲ್ಲಿ ಲಭ್ಯವಿದೆ.
ಡಿಜಿಟಲ್ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುವುದರ ಜೊತೆಗೆ ಪಾಠಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ದೃಶ್ಯಾಧಾರಿತವಾಗಿ ಬೋಧಿಸುವುದರಿಂದ ಕಲಿಕೆಯ ಮಟ್ಟ ಹೆಚ್ಚುತ್ತದೆ. ಶಿಕ್ಷಕರಿಗೂ ಪಾಠ ಬೋಧನೆ ಸುಲಭವಾಗುವುದರೊಂದಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯೂ ಹೆಚ್ಚಾಗುತ್ತದೆ.
ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗಿರುವ ಈ ಡಿಜಿಟಲ್ ಶಿಕ್ಷಣದ ಪ್ರಯತ್ನವು ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗುವ ನಿರೀಕ್ಷೆ ಇದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರದ ವಿವಿಧ ಇಲಾಖೆಗಳು ಕೈಜೋಡಿಸಿದರೆ ಸರ್ಕಾರಿ ಶಾಲೆಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಇನ್ನಷ್ಟು ವೃದ್ಧಿಯಾಗಲಿದೆ.
ಶಾಲೆಯ ಮುಖ್ಯ ಶಿಕ್ಷಕಿ ರಾಮಾ, ಸಿಆರ್‌ಪಿ ಅಶೋಕ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
-ಪುತ್ತರಿರ ಕರುಣ್ ಕಾಳಯ್ಯ