ವೀರಾಜಪೇಟೆ, ಜು. ೨೦: ಭಾರತವನ್ನು ವಿಶ್ವದ ಅತ್ಯಂತ ಶ್ರೇಷ್ಠ ದೇಶವಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಕುಸುಮ ಅಭಿಪ್ರಾಯಪಟ್ಟರು.

ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ೨೦೨೬-೨೭ನೇ ಸಾಲಿನ ಚಟುವಟಿಕೆಗಳಿಗೆÀ ಚಾಲನೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶ ಸೇರಿದಂತೆ ಪ್ರಪಂಚದಲ್ಲಿನ ವಿದ್ಯಮಾನಗಳ ಕುರಿತು ನಮ್ಮಲ್ಲಿ ಅರಿವು ಇರಬೇಕು. ಜಗತ್ತಿನಲ್ಲಿ ಯಾವುದೂ ಅಸಾಧ್ಯವೆಂಬುದಿಲ್ಲ. ನಿರಂತರವಾಗಿ ಜ್ಞಾನವನ್ನು ಪ್ರತಿಯೊಬ್ಬರೂ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣಕ್ಕೆ ಅಥವಾ ಜ್ಞಾನಾರ್ಜನೆಗೆ ಹಾಕಿದ ಬಂಡವಾಳ ಎಂದಿಗೂ ವ್ಯರ್ಥವಾಗುವುದಿಲ್ಲ. ಹುಟ್ಟುಸಾವು ನಮ್ಮ ಕೈಯಲ್ಲಿ ಇಲ್ಲದಿರಬಹುದು. ಆದರೆ ಅವೆರಡರ ನಡುವಿನ ಜೀವನ ನಮ್ಮ ಕೈಯಲ್ಲಿದೆ. ಆ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಹೇಮಂತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಸಂವಿಧಾನ ನೀಡಿರುವ ತಮ್ಮ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತೆ ಕಾಲೇಜಿನ ವಿದ್ಯಾರ್ಥಿಗಳನ್ನು ಮುನ್ನಡೆಸುವ ಹೊಣೆಗಾರಿಕೆ ವಿದ್ಯಾರ್ಥಿ ನಾಯಕರದ್ದಾಗಿದೆ ಎಂದರು. ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ರವೀಂದ್ರ ಹೆಬ್ಬಾರ್ ಮಾತನಾಡಿ ತಂದೆತಾಯಿಯರು ತಮ್ಮ ಬದುಕನ್ನು ಮಕ್ಕಳ ಭವಿಷ್ಯಕ್ಕಾಗಿ ಮುಡುಪಾಗಿಡುತ್ತಾರೆ. ಆ ತಂದೆ ತಾಯಿಯ ಕನಸನ್ನು ನನಸುಗೊಳಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು. ಬದುಕಿನಲ್ಲಿ ಗುರಿಯಿರಬೇಕು. ಆ ಗುರಿಯನ್ನು ಮುಟ್ಟುವ ತುಡಿತವೂ ಇರಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಹ್ಯಾರಿಸ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗದೇ ಪುಸ್ತಕ ಓದುವುದರತ್ತ ಹೆಚ್ಚಿನ ಗಮನಹರಿಸಬೇಕು ಎಂದರು. ಕಾಲೇಜಿನ ಆಡಳಿತ ಮೇಲ್ವಿಚಾರಕ ಕೀರ್ತಿ ಎಚ್.ಆರ್. ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಅವಿನಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಾಮೋದರ್ ನಾಯ್ಕ್, ಗಿರಿಧರ್, ಡಾ. ಹೇಮಂತ್ ಕುಮಾರ್ ಎಂ.ಎನ್, ಪ್ರಮೀಳಾ ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು..

ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಪ್ರಜ್ವಲ್ ಕೆ.ಕೆ, ಕಾರ್ಯದರ್ಶಿಯಾಗಿ ದರ್ಶಿನಿ ಕೆ.ಎಸ್, ಶಿಸ್ತು ನಾಯಕಿಯಾಗಿ ರಿಫಾ. ಯು, ಕ್ರೀಡಾನಾಯಕನಾಗಿ ಹೇಮಂತ್ ಎಂ.ಎನ್, ಆರೋಗ್ಯ ಮತ್ತು ಸ್ವಚ್ಚತಾ ನಾಯಕಿಯಾಗಿ ಭುವನೇಶ್ವರಿ ಕೆ.ಜೆ. ಪ್ರೌಢಶಾಲಾ ವಿಭಾಗದ ನಾಯಕನಾಗಿ ಗಜೇಂದ್ರ ಕೆ.ಎಸ್, ಕಾರ್ಯದರ್ಶಿಯಾಗಿ ನಜಾ ಫಾತಿಮಾ, ಶಿಸ್ತುನಾಯಕನಾಗಿ ಭರತ್ ಎಚ್.ಆರ್, ಕ್ರೀಡಾನಾಯಕನಾಗಿ ವಿನಯ್ ಟಿ.ಎಸ್, ಆರೋಗ್ಯ ಮತ್ತು ಸ್ವಚ್ಛತಾ ನಾಯಕಿಯಾಗಿ ನಫಿದಾ ಪಿ.ಎ ಪ್ರತಿಜ್ಞಾವಿಧಿ ಸ್ವೀಕರಿಸಿದರು.