ಐಗೂರು, ಜು. ೨೦: ಎಸ್.ಐ.ಆರ್. ರಾಜ್ಯ ವೀಕ್ಷಕರೂ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರೂ ಆದ ಸುದರ್ಶನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ತಂಡ ಗುರುವಾರ ಐಗೂರಿಗೆ ಭೇಟಿ ನೀಡಿತು.
ಕೆ.ಡಿ.ಪಿ. ಸದಸ್ಯರಾದ ಸಬಿತ ಚೆನ್ನಕೇಶವ ಅವರ ಐಗೂರಿನ ನಿವಾಸದಲ್ಲಿ ನಡೆದ ಸಭೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಐ.ಆರ್. ಕಾರ್ಯದ ಪ್ರಗತಿ ಹಾಗೂ ಬಿ.ಎಲ್.ಓ.ಗಳ ಕಾರ್ಯ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಮನೆ ಮನೆಗೆ ಭೇಟಿ, ಬಿಎಲ್‌ಓಗಳ ಪಾತ್ರದ ಬಗ್ಗೆ ಚರ್ಚೆ ನಡೆಯಿತು. ಐಗೂರು ವ್ಯಾಪ್ತಿಯ ಬಿಎಲ್‌ಓಗಳಾದ ಜಯಪ್ರಕಾಶ್, ಶಿವಪ್ಪ, ವಿನೋದ್ ಹಾಗೂ ಭರತ್ ಅವರಿಂದ ಕಾರ್ಯದ ಕುರಿತು ಮಾಹಿತಿ ಪಡೆದುಕೊಂಡ ವೀಕ್ಷಕರಾದ ಸುದರ್ಶನ್ ಹಾಗೂ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಯಾವುದೇ ಲೋಪ ದೋಷಗಳಿಲ್ಲದೆ ಎಸ್‌ಐಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪಾರದರ್ಶಕವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಗ್ಯಾರಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಕಾಂತರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.