ಮಡಿಕೇರಿ, ಜು. ೨೦: ಗಾಳಿಬೀಡು ಗ್ರಾಮ ಪಂಚಾಯಿತಿಯಲ್ಲಿ ೮ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಡಗದಾಳು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಅವರನ್ನು ಸ್ಥಳೀಯ ಸಂಜೀವಿನ ಮಹಿಳಾ ಒಕ್ಕೂಟ, ಗಾಳಿಬೀಡು ಮಹಿಳಾ ಸಮಾಜ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಬಿ.ಎಂ. ರಾಣಿ ವಹಿಸಿದ್ದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ.ಪಿ. ಗಣಪತಿ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಅಚ್ಚಪಟ್ಟೀರ ಶಾಲು ಕವಿತ, ಪಂಚಾಯಿತಿ ಮಾಜಿ ಸದಸ್ಯ ಎಂ.ಡಿ. ಸುಬಾಸ್ ಆಳ್ವ ಮಾತನಾಡಿದರು. ಸಂಜೀವಿನ ಒಕ್ಕೂಟದ ಸದಸ್ಯೆ ಕೋಚನ ಹಿತಾಶ್ರೀ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಕೆ.ಹೆಚ್. ಕವಿತ ವಂದಿಸಿದರು.