ಸೋಮವಾರಪೇಟೆ, ಜು. ೨೦: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿದೆ. ಅಭಿವೃದ್ಧಿ ಕುಂಠಿತವಾಗಿರುವ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ರೈತರು, ಬಡವರು, ಕೂಲಿ ಕಾರ್ಮಿಕರು, ವೃದ್ಧರಿಗೆ ಒಂದಿಲ್ಲೊAಡು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸೇರಿದಂತೆ ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ವಿಳಂಬ ಮತ್ತು ರೇಷನ್ ಕಾರ್ಡ್ಗೆ ಜಾತಿ ಪ್ರಮಾಣಪತ್ರ ಕಡ್ಡಾಯಗೊಳಿಸಿರುವುದರಿಂದ ಬಡವರು ದಿನನಿತ್ಯ ಕೂಲಿ ಕೆಲಸ ಬಿಟ್ಟು ತಾಲೂಕು ಕಚೇರಿ, ಗ್ರಾಮ ಒನ್ ಕೇಂದ್ರಗಳಲ್ಲಿ ನಿಲ್ಲುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿ ಫಲಾನುಭವಿಗಳಿಗೆ ಜಾತಿ ಪ್ರಮಾಣಪತ್ರವನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವು ಬಡವರ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಯಾದ್ಯಂತ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನಗಳು ಕಳೆದ ಹಲವು ತಿಂಗಳುಗಳಿAದ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜೀವನ ನಿರ್ವಹಣೆಗೆ ಈ ಹಣವನ್ನೇ ನಂಬಿಕೊAಡಿರುವ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವೃದ್ಧರು ಮತ್ತು ಅಂಗವಿಕಲರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರದ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯ (ಎನ್.ಎಫ್.ಎಸ್.ಎ.) ಪ್ರಕಾರ ಪಡಿತರ ವಿತರಣೆಗೆ ಆಧಾರ್ ಕಾರ್ಡ್ ಜೋಡಣೆ ಮತ್ತು ಬಯೋಮೆಟ್ರಿಕ್ ದೃಢೀಕರಣ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಅಕ್ಕಿ ವಿತರಣೆಯಲ್ಲಿ ಜಾತಿ ಹುಡುಕುವ ಕೆಲಸ ಮಾಡುತ್ತಿದೆ ಎಂದರು.

ತಳಮಟ್ಟದ ಬಡ ಮತ್ತು ಅನಕ್ಷರಸ್ಥ ಜನರಿಗೆ ತಹಶೀಲ್ದಾರ್ ಕಚೇರಿಗಳಿಂದ ಸಕಾಲದಲ್ಲಿ ಜಾತಿ ಪ್ರಮಾಣಪತ್ರ ಪಡೆಯುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಇದರಿಂದಾಗಿ ಲಕ್ಷಾಂತರ ಅರ್ಹ ಕುಟುಂಬಗಳು ಆಹಾರ ಧಾನ್ಯಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳನ್ನು ನೀಡಿ ಬಡವರಿಗೆ ಪಡಿತರ ನಿರಾಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರವೂ ಸಹ ಈ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. ಕಾಂಗ್ರೆಸ್ ಸರ್ಕಾರ ಅಕ್ಕಿ ವಿತರಣೆಗೆ ಜಾತಿ ಕೇಳುತ್ತಿರುವುದು ತೀವ್ರ ಖಂಡನೀಯ. ಬಡವರು ಯಾವುದೇ ಜಾತಿಯವರಾಗಿದ್ದರೂ ಸರ್ಕಾರ ಪಡಿತರ ವಿತರಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿ ಮಾಡುವ ಕೆಲಸ ನಡೆಸುತ್ತಿದೆ. ಕೇಂದ್ರ ಸರ್ಕಾರ ಎಲ್ಲರನ್ನೂ ಒಗ್ಗೂಡಿಸಿ ಅಭಿವೃದ್ಧಿಗೆ ಮುನ್ನಡಿಯಿಟ್ಟರೆ ಕಾಂಗ್ರೆಸ್ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಸಾಧ್ಯವಾದಷ್ಟೂ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಸರ್ಕಾರದ ಸೌಕರ್ಯಗಳಿಂದ ವಂಚಿತರನ್ನಾಗಿಸುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ, ಸಾಮಾಜಿಕ ಭದ್ರತಾ ಯೋಜನೆ ನಿರ್ಲಕ್ಷಿಸಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಪ್ರತಿ ತಿಂಗಳು ಫಲಾನುಭವಿಗಳಿಗೆ ತಲುಪುವಂತೆ ಮತ್ತು ಬಡವರ ಹಿತದೃಷ್ಟಿಯಿಂದ ಆಹಾರ ಇಲಾಖೆಯ ಅವೈಜ್ಞಾನಿಕ ಆದೇಶವನ್ನು ತಕ್ಷಣವೇ ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕಿದೆ ಎಂದು ರಂಜನ್ ಹೇಳಿದರು.

ಈ ಸಂಬAಧಿತ ಮನವಿ ಪತ್ರವನ್ನು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಮನುಕುಮಾರ್ ರೈ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪಕ್ಷದ ಪದಾಧಿಕಾರಿಗಳಾದ ಹೆಚ್.ಕೆ. ಮಾದಪ್ಪ, ಶ್ರೀನಿಧಿ ಲಿಂಗಪ್ಪ, ಮಲ್ಲಾಜೀರ ಪ್ರವೀಣ್, ಎಂ.ಬಿ. ಅಭಿಮನ್ಯುಕುಮಾರ್, ಸವಿತಾ ಸತೀಶ್, ಮಂಜುಳ ಸುಬ್ರಮಣಿ, ತಂಗಮ್ಮ, ಇಂದಿರಾ ಮೋಣಪ್ಪ, ರೂಪಾ ಸತೀಶ್, ರಾಮಕೃಷ್ಣ, ಪಿ.ಕೆ. ಚಂದ್ರು, ಮಚ್ಚಂಡ ಪ್ರಕಾಶ್, ಯಶಾಂತ್ ಕುಮಾರ್, ಬಿ.ಎ. ದರ್ಮಪ್ಪ, ಸೋಮೇಶ್, ಚಂದ್ರಶೇಖರ್ ಹೇರೂರು, ಕಿಬ್ಬೆಟ್ಟ ಮಧು, ಹುಲ್ಲೂರಿಕೊಪ್ಪ ಚಂದ್ರು, ಪ್ರಕಾಶ್ ಕಲ್ಕಂದೂರು ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.