ಪೊನ್ನಂಪೇಟೆ, ಜು, ೧೯: ರಸ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ತ್ರಿನೇತ್ರ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಪೊನ್ನಂಪೇಟೆ ಕೃಷ್ಣನಗರದ ವಿಸ್ಮಯ ಪುರುಷರ ಸ್ವಸಹಾಯ ಸಂಘ, ವತಿಯಿಂದ ಸನ್ಮಾನಿಸಲಾಯಿತು.

ಇತ್ತೀಚೆಗೆ ವೀರಾಜಪೇಟೆ - ಮಡಿಕೇರಿ ಮುಖ್ಯ ರಸ್ತೆಯಲ್ಲಿ ಮಳೆಗೆ ಮರವೊಂದು ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅದೇ ಸಂದರ್ಭದಲ್ಲಿ ಆಂಬುಲೆನ್ಸ್ ಒಂದು ಆ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಿದ ತ್ರಿನೇತ್ರ ಬಸ್ ಚಾಲಕ ಅಜಿತ್ ಮತ್ತು ಸಂಗಡಿಗರು ತಕ್ಷಣ ಮರವನ್ನು ಕಡಿದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅವರ ಈ ಸೇವೆಯನ್ನು ಗುರುತಿಸಿ, ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಚಾಲಕ ಅಜಿತ್ ಹಾಗೂ ಸಂಗಡಿಗರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮನೋಜ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಅವಿನಾಶ್, ಸದಸ್ಯರಾದ ಸೈಯದ್, ಶೀಲನ್, ಇರ್ಷಾದ್, ಅನ್ಸರ್, ರಂಶಿದ್, ಸಾನೋಜ್, ದೀಕ್ಷಿತ್, ರೋಷನ್, ಡೈಶನ್, ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.