ಹೆಬ್ಬಾಲೆ, ಜು. ೧೭: ಪೊಲೀಸ್ ಇಲಾಖೆ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರೊಬೇಷನರಿ ಠಾಣಾಧಿಕಾರಿ ತ್ರಿವೇಣಿ, ಮಕ್ಕಳೊಂದಿಗೆ ಆಪ್ತವಾಗಿ ಸಂವಾದ ನಡೆಸುತ್ತಾ ಕಾನೂನು ಮತ್ತು ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ರಸ್ತೆ ನಿಯಮಗಳ ಪಾಲನೆ: ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
ಕಾನೂನು ರಕ್ಷಣೆ: ಧೂಮಪಾನದ ದುಷ್ಪರಿಣಾಮಗಳು, ಅಪ್ರಾಪ್ತ ಬಾಲಕಿಯರ ಚುಡಾಯಿಸುವಿಕೆ ಹಾಗೂ ಪೋಕ್ಸೊ ಕಾಯ್ದೆಯಡಿ ಇರುವ ಕಠಿಣ ಕಾನೂನು ಕ್ರಮಗಳ ಬಗ್ಗೆ ಮಕ್ಕಳಿಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟರು.
ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಗೆ ಕರೆ
ಆರೋಗ್ಯಕರ ಆಹಾರ ಪದ್ಧತಿ: ಜಂಕ್ಫುಡ್ ಸೇವನೆಯಿಂದ ಆರೋಗ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹೀಗಾಗಿ ಮಕ್ಕಳು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಜೀವನದಲ್ಲಿ ಸತ್ಯವನ್ನು ರೂಢಿಸಿಕೊಳ್ಳಿ. ಓದುವ ವಿಚಾರದಲ್ಲಿ ಎಂದೂ ಹಿಂದೆ ಬೀಳಬೇಡಿ. ಜೀವನದಲ್ಲಿ ಒಂದು ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶ್ರೀ, ಶಿಕ್ಷಕಿಯರಾದ ಸುಜಾತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ, ಮುಖ್ಯ ಶಿಕ್ಷಕ ವೆಂಕಟೇಶ್, ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರತಿಮಾ ಉಪಸ್ಥಿತರಿದ್ದರು. ಶಿಕ್ಷಕಿ ರಮ್ಯಾ ಸ್ವಾಗತಿಸಿ, ವಂದಿಸಿದರು.