ವೀರಾಜಪೇಟೆ, ಜು. ೧೭: ತಂಬಾಕು, ಮದ್ಯಪಾನ, ಮಾದಕ ದ್ರವ್ಯಗಳು ಹಾಗೂ ಮೊಬೈಲ್‌ನ ಅತಿಯಾದ ಬಳಕೆ ಇಂದಿನ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದು, ವಿದ್ಯಾರ್ಥಿ ದೆಸೆಯಲ್ಲೇ ಇವುಗಳ ವಿರುದ್ಧ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಡಾ. ಗಾನಶ್ರೀ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಪೊನ್ನಂಪೇಟೆ - ಮಾಯಮುಡಿ ವಲಯದ ಎಂ.ಸಿ.ಎಸ್ ಪ್ರೌಢಶಾಲೆ ಪೊನ್ನಪ್ಪಸಂತೆಯಲ್ಲಿ ಆಯೋಜಿಸಲಾಗಿದ್ದ ಸ್ವಾಸ್ಥö್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದುಶ್ಚಟಗಳಿಂದ ಭವಿಷ್ಯ ನಾಶ

ತಂಬಾಕು ಮತ್ತು ಸಿಗರೇಟ್ ಸೇವನೆಯು ಕ್ಯಾನ್ಸರ್ ಹಾಗೂ ಶ್ವಾಸಕೋಶದ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಮದ್ಯಪಾನದಿಂದ ಲಿವರ್ ಹಾನಿಯಾದರೆ, ಡ್ರಗ್ಸ್ನಂತಹ ಮಾದಕ ವಸ್ತುಗಳು ಇಡೀ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತವೆ. ಇದರೊಂದಿಗೆ ಇಂದಿನ ದಿನಗಳಲ್ಲಿ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆ ಕೂಡ ಒಂದು ವ್ಯಸನವಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ನಿದ್ರೆಯ ಕೊರತೆ ಹಾಗೂ ಏಕಾಗ್ರತೆಯ ಸಮಸ್ಯೆಯನ್ನು ತಂದೊಡ್ಡುತ್ತಿದೆ. ದುಶ್ಚಟಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗಲಿದ್ದು, ಆರೋಗ್ಯ ಮತ್ತು ಕುಟುಂಬ ಎರಡೂ ನಾಶವಾಗುತ್ತವೆ ಎಂದು ಡಾ. ಗಾನಶ್ರೀ ಎಚ್ಚರಿಸಿದರು.

ಶ್ಲಾಘನೀಯ ಕಾರ್ಯ

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾ ಮುಖ್ಯ ಶಿಕ್ಷಕಿ ರಾಧಾ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಿರಂತರವಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶಾಲೆಗಳಲ್ಲಿ ಹಮ್ಮಿಕೊಳ್ಳುವ ‘ಸ್ವಾಸ್ಥ÷್ಯ ಸಂಕಲ್ಪ' ಕಾರ್ಯಕ್ರಮವು ಮಕ್ಕಳಿಗೆ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭ ಪೊನ್ನಪ್ಪಸಂತೆ ಒಕ್ಕೂಟದ ಅಧ್ಯಕ್ಷರಾದ ಸೀನಾ, ಯೋಜನೆಯ ಕೃಷಿ ಮೇಲ್ವಿಚಾರಕ ವಸಂತ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ, ಶಾಲಾ ಶಿಕ್ಷಕರಾದ ರೂಪ, ರಮ್ಯ, ಕವಿತಾ, ಗುಡ್ಡುದಪ್ಪ, ಕಂಡ್ರೊಳ್ಳಿ, ಸತೀಶ್ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.