ವೀರಾಜಪೇಟೆ, ಜು. ೧೬: ವೀರಾಜಪೇಟೆ ಕೊಡವ ಸಮಾಜದ ವಾರ್ಷಿಕ ಮಹಾಸಭೆ ತಾ. ೨೬ ರಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ರವಿ ಉತ್ತಪ್ಪ ತಿಳಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭೆಯ ಪುಸ್ತಕವನ್ನು ತಾ. ೨೦ ರ ನಂತರ ಕೆಲಸದ ವೇಳೆಯಲ್ಲಿ ಸಮಾಜದ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಸದಸ್ಯರೆಲ್ಲರೂ ಮಹಾಸಭೆಗೆ ಹಾಜರಾಗಬೇಕು. ಸದಸ್ಯರುಗಳ ವಿಳಾಸ ಬದಲಾಗಿದ್ದರೆ ಸಭೆಗೆ ಹಾಜರಾಗುವ ಸಂದರ್ಭ ತಮ್ಮ ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಕಾಣತಂಡ ಜಗದೀಶ್ ಮಾತನಾಡಿ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯವರು ನಮ್ಮ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದು ಚಿಕಿತ್ಸೆಯ ಆರೋಗ್ಯ ಕಾರ್ಡ್ಗಳನ್ನು ಮಾಹಾಸಭೆಯ ದಿನದಂದು ಪಡೆದುಕೊಳ್ಳಬಹುದು ಎಂದು ಹೇಳಿದರು. ಮರಣ ನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ ಮಾತನಾಡಿ, ಮಾಹಾಸಭೆಯ ದಿನದಂದು ಭಾರತ ಸರ್ಕಾರದ ಸಿಲ್ಕ್ಬೋರ್ಡ್ನ ವಿಜ್ಞಾನಿ ಹಾಗೂ ಸಮಾಜ ಸದಸ್ಯರಾದ ಕುಪ್ಪಚ್ಚಿರ ಭರತ್ ಹಾಗೂ ಕೊಡವ ಸಮಾಜಕ್ಕೆ ರಾಜ್ಯ ಸಕಾರದಿಂದ ರೂ. ೧೦ ಲಕ್ಷ ಅನುದಾನ ಒದಗಿಸಿದ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮಾತನಾಡಿ, ೨೦೨೬ನೇ ವರ್ಷದ ಕೈಲ್ಪೊಳ್ದ್ ನಮ್ಮೆ ಸೆಪ್ಟಂಬರ್ ೧೯ ಮತ್ತು ೨೦ ರಂದು ಸಮಾಜದ ಆವರಣದಲ್ಲಿ ನಡೆಯಲಿದ್ದು, ಸದಸ್ಯರುಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಉಪಸ್ಥಿತರಿದ್ದರು.