ಮಡಿಕೇರಿ, ಜು. ೧೫: ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಗ್ನಿ ಅವಘಡ ತಪ್ಪಿಸುವಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿಯ ಅಣಕು ಪ್ರದರ್ಶನ ನಡೆಯಿತು.

ಬೆಂಕಿ ಸಂಭವಿಸಿದಲ್ಲಿ ನಂದಿಸುವುದು ಹೇಗೆ, ೧೦೧ ಅಥವಾ ೧೧೨ ಗೆ ತಕ್ಷಣವೇ ಕರೆ ಮಾಡಿ, ಮಾಹಿತಿ ನೀಡುವುದು, ಅವಘಡಕ್ಕೆ ತುತ್ತಾದವರನ್ನು ಹೊರಗಡೆ ಕರೆತಂದು ಪ್ರಥಮ ಚಿಕಿತ್ಸೆ ನೀಡುವುದು, ಹೆಚ್ಚಿನ ತೊಂದರೆಗೆ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವುದು.

ಇದಕ್ಕೂ ಮೊದಲು ಪ್ರಥಮ ಚಿಕಿತ್ಸೆಯನ್ನು ನೀಡಿ ಉಪಚರಿಸುವುದು ಮತ್ತಿತರ ಕುರಿತು ಅಗ್ನಿಶಾಮಕ, ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಭಂಡಾರಿ ಅವರು ಯಾವುದೇ ಸಂದರ್ಭದಲ್ಲಿ ಕಟ್ಟಡ ಅಥವಾ ಇತರೆ ಕಡೆಗಳಲ್ಲಿ ಅಗ್ನಿ ಕಾಣಿಸಿಕೊಂಡಲ್ಲಿ ಪ್ರಥಮವಾಗಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಜೊತೆಗೆ ಅಗ್ನಿ ಶಾಮಕ ಇಲಾಖೆಗೆ ತಕ್ಷಣವೇ ಕರೆ ಮಾಹಿತಿ ನೀಡಿ, ಅಗ್ನಿ ಅವಘಡ ತಪ್ಪಿಸುವಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ ಮಾತನಾಡಿದರು. ಅಗ್ನಿಶಾಮಕ ಠಾಣಾಧಿಕಾರಿ ಶೋಭಿತ್, ಗೃಹರಕ್ಷಕ ದಳದ ಅಧಿಕಾರಿ ಅಕ್ಷಯ್ ಕುಮಾರ್, ವೈದ್ಯಾಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಇತರರು ಇದ್ದರು.