ವೀರಾಜಪೇಟೆ, ಜು.೧೫: ವೀರಾಜಪೇಟೆ ರೋಟರಿ ಕ್ಲಬ್‌ನ ವಾರ್ಷಿಕ ಸಭೆಯು ವೀರಾಜಪೇಟೆಯ ರೋಟರಿ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಗನ್ ಗಣಪತಿ ಹಾಗೂ ನೂತನ ಕಾರ್ಯದರ್ಶಿಯಾಗಿ ಕಾವಾಡಿಚಂಡ ದೀಪಕ್ ಉತ್ತಯ್ಯ ಅವರು ಮುಂದಿನ ಒಂದು ವರ್ಷದ ಅವಧಿಗೆ ಅಧಿಕಾರ ಸ್ವೀಕರಿಸಿದರು. ಡಾ. ಪ್ರಸನ್ನ ಸಿ.ಆರ್ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಬಿ.ಬಿ. ಮಾದಪ್ಪ ಅವರು ರೋಟರಿ ನಿಯಮದಂತೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿ.ಎನ್. ವಿಜಯ ಮಾತನಾಡಿ, ರೋಟರಿ ಸಂಸ್ಥೆಯು ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಂಸ್ಥೆಯಡಿ ಇರುವ 'ಸಂಧ್ಯಾ ಸುರಕ್ಷಾ' ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಡಾ. ಸಿ.ಆರ್. ಪ್ರಸನ್ನ ಮಾತನಾಡಿ, ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಹಿರಿಯ ಹಾಗೂ ನಿರ್ಗಮಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕೆಂದು ಕಿವಿಮಾತು ಹೇಳಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಗಗನ್ ಗಣಪತಿ, ನಮ್ಮ ಆಡಳಿತ ಮಂಡಳಿಯ ಅವಧಿಯಲ್ಲಿ ಉತ್ತಮ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಿದ್ಧರಿದ್ದೇವೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊAಡರೆ, ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ನೂತನ ಕಾರ್ಯದರ್ಶಿ ದೀಪಕ್ ಉತ್ತಯ್ಯ ಮಾತನಾಡಿ, ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದಾಗಿ ತಿಳಿಸಿದರು. "ನಮ್ಮ ನೂತನ ಆಡಳಿತ ಮಂಡಳಿಯು ವಿರಾಜಪೇಟೆಯ ಪೌರಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಮೂಲಕ ತನ್ನ ಸೇವೆಯನ್ನು ಆರಂಭಿಸಿದೆ," ಎಂದು ಅವರು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಮುಖಂಡರು ವಿಮಾ ಪತ್ರಗಳನ್ನು ಸ್ವೀಕರಿಸಿದರು.

ಹಿರಿಯ ರೋಟರಿ ಸದಸ್ಯರಾದ ಡಾ. ನರಸಿಂಹ ಅವರು ಪೌರಕಾರ್ಮಿಕರ ಸೇವೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳನ್ನು ಡಾ. ಲವಿನ್ ಚಂಗಪ್ಪ ಹಾಗೂ ಆದಿತ್ಯ ಪರಿಚಯಿಸಿದರು.

ಸಮಾರಂಭದಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪ, ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್. ನಗರ ರೋಟರಿ ಕ್ಲಬ್‌ಗಳ ಪ್ರಮುಖ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.