ಮುಳ್ಳೂರು, ಜು. ೧೫: ಕೊಡಗು ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಸಮೀಪದ ಮಾಲಂಬಿ ಗ್ರಾಮದ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಆರೋಗ್ಯ, ಮಕ್ಕಳ ಸ್ವಚ್ಛತೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಸತಿ ಶಾಲಾ ಮುಖ್ಯ ಶಿಕ್ಷಕ ಆನಂದ್ ಮಕ್ಕಳ ಸ್ವಚ್ಛತೆ ಕುರಿತು ಮಾತನಾಡಿ-ಮಕ್ಕಳು ಶರೀರವನ್ನು ಸ್ವಚ್ಛತೆ ಯಿಂದ ಕಾಪಾಡಿಕೊಳ್ಳಬೇಕು ಸ್ವಚ್ಛತೆ ಇದ್ದರೆ ಆರೋಗ್ಯವು ಸುಧಾರಣೆಯಾಗುತ್ತದೆ ಈ ನಿಟ್ಟಿನಲ್ಲಿ ಪೋಷಕರು ಸಹ ಮಕ್ಕಳ ಆರೋಗ್ಯ ಸ್ವಚ್ಛತೆ ಬಗ್ಗೆ ನಿಗಾವಹಿಸಬೇಕು ಎಂದರು.

ಸAಸ್ಥೆಯ ಬಿ.ಕೆ.ಕುಮಾರಿ ಮಕ್ಕಳ ಹಕ್ಕುಗಳ ಕುರಿತು ಮಾತನಾಡಿ, ಮಕ್ಕಳ ರಕ್ಷಣೆ ಸುರಕ್ಷತೆ, ಶಿಕ್ಷಣ, ಆರೋಗ್ಯ ಮುಂತಾದ ಮಕ್ಕಳ ಸರ್ವಾಂಗಿಣಿಯ ಕ್ಷೇಮಕ್ಕಾಗಿ ಪ್ರತ್ಯೇಕ ಕಾನೂನು ನಿಯಮಗಳಿದ್ದು, ಬಾಲ ಕಾರ್ಮಿಕ, ಬಾಲ್ಯ ವಿವಾಹ, ಪೋಕ್ಸೋ ಇನ್ನು ಮುಂತಾದ ಕಾಯ್ದೆಗಳು ಇವೆ. ಈ ನಿಟ್ಟಿನಲ್ಲಿ ಮಕ್ಕಳು ಮಾತ್ರವಲ್ಲದೆ ಪೋಷಕರು, ಸಾರ್ವಜನಿಕರು ಮಕ್ಕಳ ಕಾಯ್ದೆಗಳ ಬಗ್ಗೆ ಅರಿತುಕೊಂಡು ಮಕ್ಕಳನ್ನು ರಕ್ಷಣೆ ಮಾಡಲು ಸಹಕರಿಸುವಂತೆ ಮನವಿ ಮಾಡಿದರು. ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಅನುಶ್ರೀ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ವಸತಿ ಶಾಲಾ ಜಾಗದಲ್ಲಿ ಹಣ್ಣಿನ ಮತ್ತು ಉಪಯುಕ್ತ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ವಿಜೇಂದ್ರ, ಮಂಜುಳಾ, ವೀಣಾ, ಲೋಹಿತ್, ಚೈತ್ರಶ್ರೀ ಆರೋಗ್ಯ ಇಲಾಖೆ ಮತ್ತು ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.