*ಗೋಣಿಕೊಪ್ಪ, ಜು.೧೫: ಆಟೋ ಚಾಲಕರ ಹಾಗೂ ಮಾಲೀಕರ ಚಾಲನ ಪರವಾಗಿ ಮತ್ತು ಸೂಕ್ತ ದಾಖಲೆಗಳನ್ನು ಗೋಣಿಕೊಪ್ಪ ಪೊಲೀಸರು ಪರಿಶೀಲನೆ ನಡೆಸಿದರು.

ಬಸ್ ನಿಲ್ದಾಣದಲ್ಲಿ ಪರಿಶೀಲನೆಗೆ ತೊಡಗಿದ ಪೊಲೀಸರು ಪಾನಮತ್ತರಾಗಿ ಆಟೋ ಚಾಲನೆ ಮಾಡುವವರ ಬಗೆ ಗಮನಹರಿಸಿದರು. ಸುಮಾರು ೨೨ಕ್ಕೂ ಹೆಚ್ಚು ಆಟೋ ಚಾಲಕರನ್ನು ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಯಾರೂ ಪಾನಮತ್ತರಾಗಿರಲಿಲ್ಲ ಎಂದು ಗೋಣಿಕೊಪ್ಪ ಕ್ರೆöÊಂ ವಿಭಾಗದ ಠಾಣಾಧಿಕಾರಿ ವೆಂಕಟೇಶ್ ಮಾಹಿತಿ ನೀಡಿದರು.

ಆಟೋ ಚಾಲಕರು, ಮಾಲೀಕರು ನಿಯಮ ಉಲ್ಲಂಘಿಸಿ ಆಟೋ ಚಾಲನೆ ಮಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಆಟೋ ಚಾಲಕರ ಸಭೆ ಕರೆದು ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

ಸಾರ್ವಜನಿಕರು ಆಟೋ ಚಾಲಕರ ಬಗ್ಗೆ, ಹಲವಾರು ದೂರುಗಳನ್ನು ನೀಡಿದ್ದಾರೆ. ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ಪಡೆಯುವುದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವುದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಸೇರಿದಂತಹ ಇತರ ಹಲವು ದೂರುಗಳು ಬಂದಿದ್ದು, ಈ ಹಿನ್ನೆಲೆ ಸಭೆ ಕರೆದಿದ್ದು, ಇದೀಗ ಪರಿಶೀಲನೆ ನಡೆಸಲಾಗಿದೆ. ಪಟ್ಟಣದಲ್ಲಿ ಆಟೋ ಚಾಲಕರನ್ನು ಗೋಣಿಕೊಪ್ಪ ಠಾಣೆಯ ಅಪರಾಧ ವಿಭಾಗದ ಎಸ್.ಐ ವೆಂಕಟೇಶ್ ಮತ್ತು ಸಿಬ್ಬಂದಿಗಳು ಪರಿಶೀಲನೆಗೆ ಒಳಪಡಿಸಿ ಸಂಚಾರ ನಿಯಮ ಉಲ್ಲಂಘನೆ ಆಗದಂತೆ ಎಚ್ಚರಿಕೆ ನೀಡಿದರು.