ಸಿದ್ದಾಪುರ, ಜು. ೧೫: ಸಿದ್ದಾಪುರದ ಇತಿಹಾಸ ಪ್ರಸಿದ್ಧ ಶ್ರೀ ಅಯ್ಯಪ್ಪ ದೇವಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಶ್ರೀ ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ದೇವಣಿರ ಸುಜಯ್ ಮಾತನಾಡಿ, ಸಿದ್ದಾಪುರದ ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಶ್ರೀ ಅಯ್ಯಪ್ಪ ದೇವಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇರಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ನೂತನವಾಗಿ ಪ್ರಾರಂಭಿಸುವ ಅಭಿವೃದ್ಧಿ ಕಾರ್ಯಗಳಲ್ಲಿ ದೇವಾಲಯದ ಮುಂಭಾಗದ ಹಳೆಯ ಮಳಿಗೆಗಳನ್ನು ತೆರವುಗೊಳಿಸಿ ನೂತನ ಮಳಿಗೆಗಳು ಹಾಗೂ ವೇದಿಕೆ ಸೇರಿದಂತೆ ಅರ್ಚಕರ ವಾಸದ ಕೊಠಡಿಗಳು, ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಅಯ್ಯಪ್ಪ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು ಸುಮಾರು ರೂ. ೫೦ ಲಕ್ಷಕ್ಕೂ ಅಧಿಕ ವೆಚ್ಚ ತಗುಲಲಿದ್ದು, ಈಗಾಗಲೇ ನಿರ್ಮಾಣ ಮಾಡುವ ಕಟ್ಟಡದ ನೀಲಿನಕ್ಷೆಯನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದಾನಿಗಳು ಹಾಗೂ ಭಕ್ತಾದಿಗಳು ಸಹಕಾರ ನೀಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಈ ಸಂದರ್ಭ ಶ್ರೀ ಅಯ್ಯಪ್ಪ ದೇವಾಲಯ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ್ ಟಿ.ಕೆ. ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹಾಜರಿದ್ದರು.