ಮಡಿಕೇರಿ, ಜು. ೧೪; ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್ ಹಾಗೂ ಮಾಂದಲಪಟ್ಟಿ, ಆರ್‌ಟಿಒ ಕಚೇರಿ ಕಡೆಗೆ ತೆರಳುವ ರಸ್ತೆ ಕಾಮಗಾರಿ ಆರಂಭಗೊAಡಿದ್ದು, ಬದಲೀ ರಸ್ತೆಯಾಗಿ ಭಗವತಿ ನಗರಕ್ಕಾಗಿ ಅವಕಾಶ ನೀಡಲಾಗಿದೆ.

ಅಬ್ಬಿಫಾಲ್ಸ್, ಮಾಂದಲಪಟ್ಟಿಗೆ ತೆರಳುವ ಮುಖ್ಯ ರಸ್ತೆ ಮುತ್ತಪ್ಪ ದೇವಾಲಯದ ಬಳಿ ಹಲವು ವರ್ಷಗಳಿಂದ ಹದಗೆಟ್ಟು ಹೋಗಿ ಸಂಚಾರ ಕಷ್ಟ ಸಾಧ್ಯವಾಗಿತ್ತು. ಮಡಿಕೇರಿ ನಗರಸಭಾ ವ್ಯಾಪ್ತಿಗೊಳಪಡುವ ಈ ರಸ್ತೆ ದುರಸ್ತಿಪಡಿಸುವಂತೆ ಆ ಮಾರ್ಗವನ್ನು ಅವಲಂಭಿಸಿರುವವರು, ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದರು. ನಂತರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಗುತ್ತಿಗೆದಾರರು ಮಳೆ ಹಾಗೂ ಸ್ಥಳೀಯರು ಚರಂಡಿ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣದಿಂದ ವಿಳಂಬ ಮಾಡಿದ್ದರು. ಇತ್ತೀಚೆಗಷ್ಟೆ ಚರಂಡಿ ನಿರ್ಮಾಣ ಮಾಡಲಾಯಿತಾದರೂ ಮತ್ತೆ ಮಳೆ ಬಂದುದರಿAದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಸಿಲಿನ ವಾತಾವರಣವಿರುವದರಿಂದ ಮತ್ತೆ ಕಾಮಾಗಾರಿ ಆರಂಭಿಸಲಾಗಿದ್ದು, ತಾ.೧೫ರಿಂದ (ಇಂದಿನಿAದ) ಕಾಂಕ್ರಿಟ್ ಹಾಕುವ ಕೆಲಸ ನಡೆಯಲಿದೆ.

೨೦ ದಿನ ಬಂದ್

ಕಾAಕ್ರಿಟ್ ರಸ್ತೆ ಕಾಮಗಾರಿ ಆಗಿರುವದರಿಂದ ರಸ್ತೆ ಸಮರ್ಪಕವಾಗಿ ಕ್ಯೂರಿಂಗ್ ಆಗಲು ಕನಿಷ್ಟ ೨೦ ದಿನಗಳ ಅವಶ್ಯಕತೆ ಇದೆ. ಹಾಗಾಗಿ ಮುತ್ತಪ್ಪ ದೇವಾಲಯ ರಸ್ತೆ ಬಳಿಯಿಂದ ಮುಂದಕ್ಕೆ ಭಗವತಿ ದೇವಾಲಯಕ್ಕೆ ತೆರಳುವ ರಸ್ತೆಯ ಜಂಕ್ಷನ್‌ವರೆಗೆ ಬಂದ್ ಮಾಡಲಾಗಿದೆ. ಯಾವದೇ ವಾಹನ ಸಂಚಾರಕ್ಕೆ ಅವಕಾಶವಿರುವದಿಲ್ಲ.

ಬದಲೀ ಮಾರ್ಗ

ಮುಖ್ಯ ರಸ್ತೆಯ ಆರಂಭದಲ್ಲಿಯೇ ಬಂದ್ ಮಾಡಿರುವದರಿಂದ ಲಘು ವಾಹನಗಳ ಸಂಚಾರಕ್ಕೆ ಬದಲಿ ರಸ್ತೆ ಮೂಲಕ ವ್ಯವಸ್ಥೆ ಮಾಡಲಾಗಿದೆ. ಮುತ್ತಪ್ಪ ದೇವಾಲಯ ಬಳಿಯಿಂದ ಎಡಕ್ಕೆ ಕಾನ್ವೆಂಟ್‌ಗೆ ತೆರಳುವ ರಸ್ತೆ ಮೂಲಕ ಸಾಗಿ, ಕಾನ್ವೆಂಟ್ ಬಳಿ ಮತ್ತೆ ಬಲಕ್ಕೆ ತಿರುಗಿ ಭಗವತಿ ನಗರ ರಸ್ತೆಗಾಗಿ ಮುಂದಕ್ಕೆ ತೆರಳಿ ಮತ್ತೆ ಬಲಕ್ಕೆ ತಿರುಗಿ ಅಲ್ಲಿಂದ ಭಗವತಿ ದೇವಾಲಯದ ಬಳಿಯಿಂದ ಎಡಕ್ಕೆ ತೆರಳಿದರೆ ಅಬ್ಬಿಫಾಲ್ಸ್ ರಸ್ತೆಯಲ್ಲಿರುವ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಗೋಶಾಲೆ ಬಳಿ ಸೇರ್ಪಡೆಯಾಗಲಿದೆ. ಅತ್ತ ಅಬ್ಬಿಫಾಲ್ಸ್ ಕಡೆಯಿಂದ ಬರುವ ವಾಹನಗಳು ಭಗವತಿ ದೇವಾಲಯಕ್ಕೆ ತೆರಳುವ ರಸ್ತೆಯ ಜಂಕ್ಷನ್‌ವರೆಗೆ ಆಗಮಿಸಿ ಅಲ್ಲಿಂದ ಭಗವತಿ ದೇವಾಲಯಕ್ಕಾಗಿ ಹಾದು ಕಾನ್ವೆಂಟ್ ರಸ್ತೆಗಾಗಿ ನಗರವನ್ನು ತಲಪಬಹುದಾಗಿದೆ.

ಭಾರೀ ವಾಹನಗಳಿಗೆ ಅವಕಾಶವಿಲ್ಲ

ಇದೀಗ ವ್ಯವಸ್ಥೆ ಮಾಡಲಾಗಿರುವ ಬದಲೀ ರಸ್ತೆ ಕಿರಿದಾಗಿರುವದರಿಂದ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಸಾಧ್ಯವಾಗಲಿದೆ. ಅದೂ ಕೂಡ ಪ್ರಯಾಸದಲ್ಲಿ. ಕೆಲವೊಂದು ಕಡೆಗಳಲ್ಲಿ ಎದುರು ಬದುರು ವಾಹನಗಳಿಗೆ ಜಾಗ ಬಿಟ್ಟು ಕೊಡಲು ಅವಕಾಶ ಕೂಡ ಕಡಿಮೆ ಇದೆ. ಹಾಗಾಗಿ ಬಸ್, ಮಿನಿ ಬಸ್, ಟಿಟಿ ಮುಂತಾದ ವಾಹನಗಳಿಗೆ ಸಂಚರಿಸಲು ಸಾಧ್ಯವಿಲ್ಲದ ಕಾರಣ ಅವುಗಳ ಸಂಚಾರ ನಿಷೇಧಿಸಲಾಗಿದೆ.

ನಡೆದು ಬರಬಹುದು

ಒಂದು ವೇಳೆ ಬಸ್ ಹಾಗೂ ಇನ್ನಿತರ ಭಾರೀ ವಾಹನಗಳಲ್ಲಿ ಬರುವವರು ಮುತ್ತಪ್ಪ ದೆವಾಲಯದ ಬಳಿ ವಾಹನಗಳನ್ನು ನಿಲುಗಡೆಗೊಳಿಸಿ ಅಲ್ಲಿಂದ ಭಗವತಿ ದೇವಾಲಯ ರಸ್ತೆ ಜಂಕ್ಷನ್‌ವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಾಡಿಗೆ ವಾಹನಗಳನ್ನು ಪಡೆದು ಅದರಲ್ಲಿ ತೆರಳಲು ಅವಕಾಶವಿದೆ. ಮಾಂದಲಪಟ್ಟಿಗೆ ಬಾಡಿಗೆಗೆ ತೆರಳುವ ಜೀಪ್‌ಗಳು ಜಂಕ್ಷನ್ ಬಳಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ.