ಮಡಿಕೇರಿ, ಜು. ೧೪: ಪ್ರಸಕ್ತ ವರ್ಷ ಮುಂಗಾರು ಮಳೆಯ ಈ ಸಂದರ್ಭದಲ್ಲಿ ಕಂಡುಬರುತ್ತಿರುವ ವಾತಾವರಣದ ಅಸಹಜತೆ ಜಿಲ್ಲೆಯ ರೈತಾಪಿ ವರ್ಗವನ್ನು ಕಂಗೆಡೆಸುವAತೆ ಮಾಡುತ್ತಿದೆ. ಧೋ... ಎಂದು ಮಳೆಯಾಗಬೇಕಿದ್ದ ಈ ಸನ್ನಿವೇಶದಲ್ಲಿ ಬೇಸಿಗೆಯಂತೆ ಬಿಸಿಲಿನ ವಾತಾವರಣ ಎದುರಾಗುತ್ತಿರುವುದು ವಿವಿಧ ರೀತಿಯಲ್ಲಿ ಕೃಷಿ ಫಸಲುಗಳತ್ತ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೆಳೆಗಾರರು, ರೈತರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಭತ್ತದ ಕೃಷಿ ಕೆಲಸ ಕಾರ್ಯಗಳು ಭರದಿಂದ ಸಾಗಬೇಕಿತ್ತು. ಆದರೆ ನಿರೀಕ್ಷಿತ ಮಳೆ ಸುರಿಯದೆ ಮುಂಗಾರು ಈ ಹಿಂದಿನ ವರ್ಷಗಳಿಗಿಂತ ತೀರಾ ದುರ್ಬಲವಾಗಿದೆ. ಗದ್ದೆಗಳಲ್ಲಿ ನೀರಿಲ್ಲದೆ ರೈತರು ಬಿತ್ತನೆ ಕೆಲಸ, ಉಳುಮೆ ಕೆಲಸಕ್ಕೆ ಪರದಾಡುತ್ತಿದ್ದಾರೆ. ಮೊದಲೇ ಭತ್ತದ ಕೃಷಿಯತ್ತ ರೈತರ ಆಸಕ್ತಿ ಕಡಿಮೆಯಾಗುತ್ತಿದ್ದು, ಈ ಬಾರಿಯ ವಾತಾವರಣದಿಂದಾಗಿ ಇದು ಇನ್ನಷ್ಟು ಹಿನ್ನಡೆ ಕಾಣುವಂತಾಗಿದೆ. ಕೃಷಿ ಇಲಾಖೆಯ ಅಂದಾಜಿನAತೆ ಈ ಬಾರಿ ೧೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಯ ಗುರಿ ನಿಗದಿ ಮಾಡಲಾಗಿತ್ತು.

ಆದರೆ, ಈಗಿನ ಪರಿಸ್ಥಿತಿಯಲ್ಲಿ ಇದು ಭಾರೀ ಪ್ರಮಾಣದಲ್ಲಿ ಕುಂಠಿತವಾಗುವ ಸಾಧ್ಯತೆ ಇದೆ. ಈತನಕ ೧೦೩ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಡೆದಿದ್ದು, ಶೇ. ೦.೬ ರಷ್ಟು ಸಾಧನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ. ೨೮ ರಷ್ಟು ಪ್ರಗತಿಯಾಗಿತ್ತು. ಜಿಲ್ಲೆಯಲ್ಲಿ ೧೩೦೦ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ಕೃಷಿ ಇಲಾಖೆ ಮೂಲಕ ಲಭ್ಯವಿದ್ದು, ಇದರಲ್ಲಿ ೪೫೦ ಕ್ವಿಂಟಾಲ್ ಮಾತ್ರ ರೈತರು ಖರೀದಿಸಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ ೬೦೦ ಕ್ವಿಂಟಾಲ್‌ಗೂ ಅಧಿಕ ಮಾರಾಟವಾಗಿತ್ತು ಎಂದು ಕೃಷಿ ಇಲಾಖೆ ಮಾಹಿತಿ ತಿಳಿಸಿವೆ.

ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಂತಿರುವ ಕಾಫಿ ಬೆಳೆಗೂ ಈಗಿನ ವಾತಾವರಣ ಹಲವು ಬಗೆಯಲ್ಲಿ ಸಮಸ್ಯೆ ತರುವ ಆತಂಕ ಎದುರಾಗುತ್ತಿದೆ. ಮಳೆ ಕಡಿಮೆಯಿದ್ದರೂ ಈಗಾಗಲೇ ಕಾಯಿಗಟ್ಟುವ ಕಾಫಿ ಉದುರುತ್ತಿರುವ ಪ್ರಸಂಗ ಹಲವೆಡೆ ಕಂಡುಬರುತ್ತಿದೆ.

ಕಾಫಿಗೆ ನೀರುಣಿಸಲು (ಹೂಮಳೆ) ನೀರಿನ ಸಮಸ್ಯೆ ಎದುರಾಗುವುದರಿಂದ ಬೆಳೆಗಾರರು ಜನವರಿ - ಫೆಬ್ರವರಿ ವೇಳೆಗೇ ನೀರು ಹಾಯಿಸಲು ತರಾತುರಿಯ ಪ್ರಯತ್ನ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಇದರ ಪರಿಣಾಮದಿಂದ ಕಾಫಿ ಫಸಲು ಬೇಗನೆ ಬರಲಿದ್ದು, ಈಗಾಗಲೇ ಕೆಲವಾರು ಕಡೆಗಳಲ್ಲಿ ಕಾಫಿ ದಪ್ಪವಾಗಿದೆ. ಇದು ಪ್ರಸಕ್ತ ಆಗಾಗ್ಗೆ ಎದುರಾಗುತ್ತಿರುವ ಬಿಸಿಲು - ನಡು ನಡುವೆ ಸುರಿಯುವ ಮಳೆಯಿಂದಾಗಿ ಉದುರಲಾರಂಭಿಸಿದೆ ಎಂಬದು ಹಲವು ಬೆಳೆಗಾರರ ಅಳಲಾಗಿದೆ. ಮಾರ್ಚ್ ನಂತರದಲ್ಲಿ ನೀರು ಹಾಯಿಸಿದವರಿಗೆ ತಡವಾಗಿ ಬಂದ ಮಳೆಗೆ ಕಾಫಿ ಹೂಗಟ್ಟಿದ್ದವರಿಗೆ ಈ ಸಮಸ್ಯೆ ಒಂದಷ್ಟು ಕಡಿಮೆಯಿದೆ.

ಆದರೂ ಮುಂದಿನ ದಿನಗಳಲ್ಲಿ ಎಲ್ಲಾದರು ನಿರಂತರವಾಗಿ ಮಳೆಯಾದರೆ ಉದುರುವಿಕೆ ಹೆಚ್ಚಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಈ ಬಾರಿಯ ಫಸಲಿನ ಆತಂಕ ಒಂದೆಡೆಯಾದರೆ, ಇದು ಮುಂದಿನ ವರ್ಷದ ಫಸಲಿನ ಮೇಲೂ ತೀರಾ ವ್ಯತಿರಿಕ್ತ ಪರಿಣಾಮದ ಆತಂಕವೂ ಇದೆ ಏಕೆಂದರೆ, ಇನ್ನೂ ಎಂದಿನAತೆ ಈ ಬಾರಿ ಜಲ ಎದ್ದಿಲ್ಲ. ಈ ಕಾರಣದಿಂದ ತೇವಾಂಶ ಕಡಿಮೆಯಾಗಿ ಗಿಡಕ್ಕೂ ಸಮಸ್ಯೆ ಎದುರಾಗಬಹುದು ಎಂದು ಅನುಭವಿ ಬೆಳೆಗಾರರು ಅಭಿಪ್ರಾಯಪಡುತ್ತಾರೆ.

ಅಲ್ಲದೆ ಪ್ರಸ್ತುತದ ದಿನಗಳು ಈಗಿನ ಫಸಲಿನ ಅಭಿವೃದ್ಧಿಯ, ಬೀಜಕಟ್ಟುವ ಪ್ರಮುಖ ಸನ್ನಿವೇಶವಾಗಿದೆ. ಆದರೆ ಈ ಸಂದರ್ಭದಲ್ಲಿ ಮಳೆಯೇ ಇಲ್ಲದೆ ಬಿಸಿಲು ಬರುತ್ತಿರುವುದು ಭವಿಷ್ಯದಲ್ಲಿ ಸಮಸ್ಯೆಯಾಗಬಹುದು ಎನ್ನಲಾಗುತ್ತಿದೆ. ಜತೆಗೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತೀರಾ ಉಷ್ಣಾಂಶವೂ ಏರಿಕೆ ಕಂಡಿತ್ತು. ಇದೂ ಫಸಲಿಗೆ ಧಕ್ಕೆಯಾಗಿದೆ ಎಂದು ಅನಭವಿ ಬೆಳೆಗಾರರಾದ ಬೋಸ್ ಮಂದಣ್ಣ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದರ ಮೇಲೆ ಒಂದಷ್ಟು ಅಗತ್ಯ ಮಳೆಯಾದಲ್ಲಿ ಪರವಾಗಿಲ್ಲ. ಇಲ್ಲದಿದ್ದಲ್ಲಿ ಮುಂದಿನ ಸಾಲಿನ ಫಸಲು ಸೇರಿ ಈ ಬಾರಿಯ ಬೆಳೆಗೂ ವ್ಯತಿರಿಕ್ತ ಪರಿಣಾಮ ಈಗಿನ ವಾತಾವರಣದಿಂದ ಎದುರಾಗಲಿದೆ ಎಂದು ಮತ್ತೋರ್ವ ಬೆಳೆಗಾರ ಪೊನ್ನಚೆಟ್ಟಿರ ಸುಬ್ಬಯ್ಯ ಅವರು ಹೇಳುತ್ತಾರೆ. ಪ್ರಸ್ತುತ ಕರಿಮೆಣಸು ಫಸಲೂ ಕಡಿಮೆ ಕಂಡುಬರುತ್ತಿದೆ. ಜೂನ್ ತಿಂಗಳಲ್ಲಿ ಗಿಡಗಳಲ್ಲಿ ಹೆಚ್ಚಾಗಿ ತಿರುಳು ಬರಬೇಕಿತ್ತು. ಆದರೆ, ಈ ಬಾರಿ ತಿರುಳು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತಿರುಳು ಬಿಟ್ಟರೂ ಫಸಲು ಹಿಡಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಬಾರಿ ಕಿತ್ತಳೆ ಫಸಲೂ ಜಿಲ್ಲೆಯಲ್ಲಿ ತೀರಾ ಕಡಿಮೆಯಾಗಿದೆ.