ಪೊನ್ನಂಪೇಟೆ, ಜು.೧೩: ಮಡಿಕೇರಿ ತಾಲೂಕಿನ ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಹೊಸ ಮೆರಗು ಪಡೆದುಕೊಂಡಿದೆ.
ಸಮಾಜ ಸೇವಕ ಪ್ರಶಾಂತ್ ಮುತ್ತಣ್ಣ ಕೋಳಿಮಾಡು ಅವರ ಮುಂದಾಳತ್ವದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ, ಹಲವು ವರ್ಷಗಳಿಂದ ಬಣ್ಣ ಕಾಣದೆ ಕಳೆಗುಂದಿದ್ದ ಶಾಲಾ ಕಟ್ಟಡವನ್ನು ಸುಂದರಗೊಳಿಸಲಾಗಿದೆ.
ಈ ಮಾದರಿ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೈಜೋಡಿಸಿ ರೂ. ೧ ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ, ಶಾಲೆಯ ಕಟ್ಟಡಕ್ಕೆ ಸಂಪೂರ್ಣವಾಗಿ ಬಣ್ಣ ಬಳಿಯಲಾಗಿದ್ದು, ಗೋಡೆಗಳು, ಕಿಟಕಿ, ಬಾಗಿಲುಗಳು ಹಾಗೂ ಕಪ್ಪು ಫಲಕಗಳನ್ನು ನವೀಕರಿಸಲಾಗಿದೆ.
ಕಾಮಗಾರಿ ಮುಗಿದ ನಂತರ ಶಾಲೆಯು ಸುಂದರವಾಗಿ ಕಂಗೊಳಿಸುತ್ತಿದ್ದು, ಮಕ್ಕಳಿಗೆ ಕಲಿಯಲು ಪ್ರೇರಣೆ ನೀಡುವ ಆಕರ್ಷಕ ಮತ್ತು ಹಿತಕರ ವಾತಾವರಣವಾಗಿ ಸೃಷ್ಟಿಯಾಗಿದೆ.