ಬೆಂಗಳೂರು, ಜು. ೧೩: ಕೊಡಗಿನ ಮಲ್ಲಳ್ಳಿಯಲ್ಲಿ ಸೇರಿದಂತೆ ರಾಜ್ಯದಲ್ಲಿ ಪ್ರಸ್ತಾಪಿಸಲಾಗಿರುವ ೧೩ ರೋಪ್ವೇ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಆಯುಕ್ತÀ ಡಾ. ವಿ. ರಾಮ್ ಪ್ರಸಾದ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ವಿವಿಧ ರೋಪ್ವೇ ಯೋಜನೆಗಳ ಪ್ರಗತಿಯನ್ನು ಸಚಿವರು ಸಮಗ್ರವಾಗಿ ಪರಿಶೀಲಿಸಿದರು.
ಸಭೆಯಲ್ಲಿ ಹಲವು ವರ್ಷಗಳಿಂದ ರೋಪ್ವೇ ಯೋಜನೆಗಳು ಪ್ರಸ್ತಾಪದ ಹಂತದಲ್ಲಿಯೇ ಉಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯೋಜನೆಗಳಿಗೆ ಟೆಂಡರ್ ಆಹ್ವಾನಿಸುವ ಮುನ್ನವೇ ಅರಣ್ಯ, ಪರಿಸರ ಸೇರಿದಂತೆ ಸಂಬAಧಿತ ಎಲ್ಲ ಇಲಾಖೆಗಳ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ತಪ್ಪಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾಜ್ಯದ ೧೩ ರೋಪ್ವೇ ಯೋಜನೆಗಳಿಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಸಂಸ್ಥೆಯೊAದಕ್ಕೆ ವಹಿಸಲಾಗಿದ್ದು, ಈಗಾಗಲೇ ೮ ಯೋಜನೆಗಳ ವರದಿಗಳು ಪೂರ್ಣಗೊಂಡಿವೆ. ಉಳಿದ ಯೋಜನೆಗಳ ಕಾರ್ಯಸಾಧ್ಯತಾ ವರದಿಗಳನ್ನು ಆದ್ಯತೆಯ ಮೇರೆಗೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಕೊಡಗಿನ ಮಲ್ಲಳ್ಳಿ, ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತ, ಯಾದಗಿರಿ ಜಿಲ್ಲೆಯ ಮೈಲಾರ ಲಿಂಗೇಶ್ವರ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ದೇವಸ್ಥಾನದ ರೋಪ್ವೇ ಯೋಜನೆಗಳಿಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗಳು ಈಗಾಗಲೇ ಸಿದ್ಧಗೊಂಡಿದ್ದು, ಗೋಕಾಕ್ ರೋಪ್ವೇ ಯೋಜನೆಗೆ ಹಣಕಾಸು ಇಲಾಖೆಯ ಅನುಮತಿಯೂ ದೊರೆತಿದೆ. ಈ ಯೋಜನೆಯನ್ನು ಮುಂದಿನ ಸಚಿವ ಸಂಪುಟ ಸಭೆಯ ಅನುಮೋದನೆಗೆ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ರೋಪ್ವೇ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಯೋಜನೆಗಳು ನಿಗದಿತ ಸಮಯದಲ್ಲಿ ಆರಂಭವಾಗಲು ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಆದ್ಯತೆಯ ಮೇರೆಗೆ ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತರು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳೊಂದಿಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮನ್ವಯ ಸಾಧಿಸಿ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ಪಡೆಯುವಂತೆ ಅವರು ನಿರ್ದೇಶಿಸಿದರು.
ರೈಟ್ಸ್ ಸಂಸ್ಥೆಯು ಕೇಂದ್ರ ಸರ್ಕಾರದ ಅಧೀನದ ಮೂಲ ಸೌಕರ್ಯ ಒದಗಿಸುವ ಸಂಸ್ಥೆ ಆಗಿದ್ದು ಇದನ್ನು ೧೯೭೪ ರಲ್ಲಿ ರೈಲ್ವೇ ಯೋಜನೆಗಳಿಗೆ ಮೂಲ ಸೌಕರ್ಯ ಒದಗಿಸಲು ಸ್ಥಾಪಿಸಲಾಗಿದೆ. ಕಂಪನಿಯು ರೈಲ್ವೆಗಳು, ಹೆದ್ದಾರಿಗಳು, ಮೆಟ್ರೋಗಳು, ಸುರಂಗಗಳು, ಸೇತುವೆಗಳು, ನಗರಾಭಿವೃದ್ಧಿ, ಕಟ್ಟಡಗಳು, ವಿಮಾನ ನಿಲ್ದಾಣಗಳು, ಬಂದರುಗಳು, ರೋಪ್ವೇಗಳು, ಒಳನಾಡಿನ ಜಲಮಾರ್ಗಗಳು, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ಗಳು ಮತ್ತು ಹಸಿರು ಚಲನಶೀಲತೆ ಸೇರಿದಂತೆ ಈ ಕ್ಷೇತ್ರದಲ್ಲಿ ಸಲಹಾ, ಇಂಜಿನಿಯರಿAಗ್ ಮತ್ತು ಯೋಜನಾ ವಿತರಣಾ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಭಾರತದಲ್ಲಿ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ೫೫ ಕ್ಕೂ ಹೆಚ್ಚು ದೇಶಗಳಲ್ಲಿ ೫,೦೦೦ ಕ್ಕೂ ಹೆಚ್ಚು ಯೋಜನೆಗಳನ್ನು ಕೈಗೆತ್ತಿಕೊಂಡು ಮುಗಿಸಿದೆ.
- ಕೋವರ್ ಕೊಲ್ಲಿ ಇಂದ್ರೇಶ್