ಗೋಣಿಕೊಪ್ಪಲು, ಜು. ೧೩: ಗೋಣಿಕೊಪ್ಪಲು ಪಟ್ಟಣದಲ್ಲಿ ಕೆಲವು ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ವೀರಾಜಪೇಟೆ ಡಿವೈಎಸ್ಪಿ ಮಹೇಶ್ಕುಮಾರ್ ಅವರು ಆಟೋ ಚಾಲಕರು ಹಾಗೂ ಮಾಲೀಕರ ಸಭೆ ನಡೆಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ನಗರದ ಪರಿಮಳ ಮಂಗಳ ವಿಹಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪರವಾನಿಗೆ ಇಲ್ಲದೆ ಆಟೋ ಚಲಾಯಿಸುವುದು, ಸೂಕ್ತ ದಾಖಲೆಗಳಿಲ್ಲದೆ ವಾಹನ ಓಡಿಸುವುದು, ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ಪಡೆಯುವುದು, ನಿಗದಿತ ಸಂಖ್ಯೆಗಿAತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಸೇರಿದಂತೆ ಹಲವು ದೂರುಗಳು ಬಂದಿವೆ ಎಂದು ತಿಳಿಸಿದರು.
ಬಸ್ ನಿಲ್ದಾಣಕ್ಕೆ ಬಸ್ಗಳು ಆಗಮಿಸಿದ ಸಂದರ್ಭದಲ್ಲಿ ಆಟೋಗಳನ್ನು ಬಸ್ಗಳ ಹಿಂಭಾಗಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಹಾಗೂ ನಿಲ್ದಾಣದ ಸುತ್ತಮುತ್ತ ಅನಗತ್ಯವಾಗಿ ಆಟೋಗಳನ್ನು ನಿಲ್ಲಿಸುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದರು. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತç ಧರಿಸಬೇಕು. ವಾಹನದ ಅಗತ್ಯ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಕಾನೂನು ಪಾಲನೆ ಮಾಡದಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್ಚರಿಸಿದರು. ಪ್ರಯಾಣಿಕರೊಂದಿಗೆ ಸೌಹಾರ್ದ ಯುತವಾಗಿ ವರ್ತಿಸಬೇಕು. ಅಮಲು ಪದಾರ್ಥ, ಮದ್ಯ ಸೇವಿಸಿ ಆಟೋ ಚಲಾಯಿಸುವುದು ಕಂಡುಬAದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಹೆಚ್ಚಿನ ಬಾಡಿಗೆ ವಸೂಲಿ ಮಾಡಿದಲ್ಲಿ ಪ್ರಯಾಣಿಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಆಟೋ ಚಾಲಕರು, ಗೋಣಿಕೊಪ್ಪಲುವಿನಲ್ಲಿ ಸುಮಾರು ೪೦೦ ಆಟೋಗಳು ಸಂಚರಿಸುತ್ತಿದ್ದು, ಕೆಲವೇ ಕೆಲವು ಚಾಲಕರಿಂದ ಸಮಸ್ಯೆಗಳು ಉಂಟಾಗುತ್ತಿವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆರ್ಟಿಒ ಅಧಿಕಾರಿ ಮೋಹನ್ಕುಮಾರ್ ಮಾತನಾಡಿ, ಮದ್ಯ ಸೇವಿಸಿ ಆಟೋ ಚಾಲನೆ ಮಾಡಿದಲ್ಲಿ ಚಾಲನಾ ಪರವಾನಿಗೆ ರದ್ದುಪಡಿಸುವ ಹಾಗೂ ಹೆಚ್ಚಿನ ದಂಡ ವಿಧಿಸುವ ಅವಕಾಶವಿದೆ. ವಾಹನದಲ್ಲಿ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದರು.
ಗೋಣಿಕೊಪ್ಪ ಠಾಣಾಧಿಕಾರಿ ಕಾಳೆಗೌಡ ಮಾತನಾಡಿ, ಆಟೋ ಚಾಲಕರು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ನಿಯಮ ಪಾಲಿಸಿದರೆ ಪೊಲೀಸರ ಕ್ರಮದ ಭಯ ಇರುವುದಿಲ್ಲ ಎಂದರು. ಸಭೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯ ಶರತ್ಕಾಂತ್, ಠಾಣಾಧಿಕಾರಿ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.