ಪೊನ್ನಂಪೇಟೆ, ಜು. ೧೩: ಪೊನ್ನಂಪೇಟೆ ತಾಲೂಕಿನ ಕಿರುಗೂರು-ಬಾಳೆಲೆ ಮುಖ್ಯ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಗಿರುವ ಒಣಗಿದ ಮರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಿರುಗೂರು ಸಮೀಪದ ಖಾಸಗಿ ಕಾಫಿ ತೋಟದ ಬದಿಯಲ್ಲಿರುವ ಈ ಬೃಹತ್ ಒಣಗಿದ ಮರ ಮುಖ್ಯ ರಸ್ತೆಯತ್ತ ವಾಲಿಕೊಂಡಿದ್ದು, ಬಿರುಗಾಳಿ ಅಥವಾ ಭಾರೀ ಮಳೆಯ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಉರುಳಿ ಬೀಳುವ ಅಪಾಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಿರುಗೂರು ಮಾರ್ಗವಾಗಿ ಪೊನ್ನಪ್ಪಸಂತೆ, ಬಾಳೆಲೆ ಹಾಗೂ ತಿತಿಮತಿ ಮೂಲಕ ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ್ದರಿಂದ, ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ ವಾಹನಗಳು, ಸಾರ್ವಜನಿಕ ಬಸ್‌ಗಳು, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಮರ ಉರುಳಿದರೆ ಗಂಭೀರ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.

ಮಳೆಗಾಲದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿರುವ ಘಟನೆಗಳು ನಡೆದಿರುವುದರಿಂದ ಕಿರುಗೂರು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಯಾವುದೇ ಅನಾಹುತ ಸಂಭವಿಸುವ ಮುನ್ನ ರಸ್ತೆ ಬದಿ ಒಣಗಿದ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.