ಸಿದ್ದಾಪುರ, ಜು. ೧೩: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರಲ್ಲಿ ಇದೀಗ ಹುಲಿಯ ಸಂಚಾರ ಆತಂಕ ಮೂಡಿಸಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಇಂಜಿಲಗೆರೆ ಗ್ರಾಮದ ಪುಲಿಯೇರಿ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಪುಲಿಯೇರಿ ಗ್ರಾಮದ ನಿವಾಸಿ ಕುಪ್ಪಂಡ ಕವಿನ್ ಅವರ ಕಾಫಿ ತೋಟದ ಮೂಲಕ ಸಿದ್ದಾಪುರ-ಗುಹ್ಯ ಮಾರ್ಗವಾಗಿ ಹುಲಿ ಸಂಚರಿಸಿ ಖಾಸಗಿ ಸಂಸ್ಥೆಯ ಬೀಟಿಕಾಡು ಕಾಫಿ ತೋಟದತ್ತ ತೆರಳಿರುವ ಕುರುಹುಗಳು ಕಂಡುಬAದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತ್ತೀಚೆಗೆ ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಪಾಲಿಬೆಟ್ಟ ರಸ್ತೆಯಲ್ಲೂ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಲಿಯ ಓಡಾಟದಿಂದ ಗ್ರಾಮಸ್ಥರು ಹಾಗೂ ಕಾಫಿ ತೋಟದ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ.

ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದು, ಅದರ ಚಲನವಲನ ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಈಗಾಗಲೇ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಇದೀಗ ಹುಲಿಯ ಓಡಾಟವೂ ಕಂಡುಬAದಿರುವುದರಿAದ ವನ್ಯಜೀವಿಗಳ ಹಾವಳಿ ಮತ್ತಷ್ಟು ಹೆಚ್ಚುವ ಭೀತಿಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ವನ್ಯಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.