ಸಿದ್ದಾಪುರ, ಜು. ೧೩: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದರು. ಆದರೆ, ಆನೆಗಳ ಹಿಂಡು ತೋಟಗಳಿಂದ ಹೊರಬರಲು ಹಿಂದೇಟು ಹಾಕಿದ ಪರಿಣಾಮ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಲಿಲ್ಲ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಬ್ಯೆರಂಬಾಡ, ಕಣ್ಣಂಗಾಲ, ಯಡೂರು, ಪಲ್ಲಕೆರೆ ಸೇರಿದಂತೆ ವಿವಿಧ ಭಾಗಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ಬೆಳೆ ನಾಶ ಮಾಡುತ್ತಿದ್ದು, ಕೆಲ ಸಂದರ್ಭಗಳಲ್ಲಿ ಮಾನವರ ಮೇಲೂ ದಾಳಿ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆ ವೇಳೆ ಕಾಡಾನೆಗಳ ಹಿಂಡು ಬೇರ್ಪಟ್ಟು ಒಂದೊAದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುವ ಮೂಲಕ ಕಾರ್ಯಾಚರಣೆ ತಂಡಕ್ಕೆ ಸವಾಲು ಒಡ್ಡಿತು. ಈ ಸಂದರ್ಭ ರೇಡಿಯೋ ಕಾಲರ್ ಅಳವಡಿಸಲಾಗಿರುವ ‘ದಕ್ಷ’ ಹೆಸರಿನ ಆನೆಯೊಂದು ಕಾರ್ಯಾಚರಣೆ ತಂಡದ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಅಪಾಯ ಅರಿತ ಸಿಬ್ಬಂದಿ ಕಾಫಿ ತೋಟದೊಳಗೆ ಓಡಿ ಹೋಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಮರಿಯಾನೆಗಳು ಸೇರಿದಂತೆ ಸುಮಾರು ೧೬ಕ್ಕೂ ಹೆಚ್ಚು ಕಾಡಾನೆಗಳು ಕಂಡುಬAದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನ ನಡೆಸಿದರೂ ಆನೆಗಳು ಕಾಫಿ ತೋಟ ಬಿಟ್ಟು ಕಾಡಿನತ್ತ ತೆರಳಲಿಲ್ಲ. ರೇಡಿಯೋ ಕಾಲರ್ ಅಳವಡಿಸಿರುವ ‘ದಕ್ಷ’ ಹಾಗೂ ‘ಮೀರಾ’ ಆನೆಗಳು ಕೂಡ ಹಿಂಡಿನಲ್ಲಿರುವುದು ಕಂಡುಬAದಿದೆ. ಮರಿಯಾನೆಗಳು ಇರುವ ಕಾರಣದಿಂದ ಆನೆಗಳ ಗುಂಪು ತೋಟದಿಂದ ಹೊರಬರಲು ಹಿಂದೇಟು ಹಾಕುತ್ತಿವೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ದೊರೆಯುತ್ತಿರುವ ಹಲಸಿನ ಕಾಯಿಗಳನ್ನು ತಿನ್ನುತ್ತಾ ಆನೆಗಳು ಇಲ್ಲೇ ವಾಸಸ್ಥಾನ ಮಾಡಿಕೊಂಡಿವೆ. ರಾತ್ರಿ ವೇಳೆಯಲ್ಲೂ ಆನೆಗಳು ಕಾಡಿಗೆ ತೆರಳದಿದ್ದರೆ ಮತ್ತೆ ಕಾರ್ಯಾಚರಣೆ ನಡೆಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್ ಹಾಗೂ ಎಸಿಎಫ್ ತಾಸೀಂಬಾನು ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪವಲಯ ಅರಣ್ಯಾಧಿಕಾರಿ ಮನೋಜ್, ಅರಣ್ಯ ಸಿಬ್ಬಂದಿ, ಆನೆ ಕಾರ್ಯಪಡೆ ಹಾಗೂ ಆರ್ಆರ್ಟಿ ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು.