ಮಡಿಕೇರಿ,ಜು.೧೧; ಪ್ರಸ್ತುತ ಚುನಾವಣಾ ಆಯೋಗದ ಅಣತಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭ ಸಮರ್ಪಕ ದಾಖಲೆಗಳಿಲ್ಲದವರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ಸಂವಿಧಾನಕ್ಕೆ ವಿರೋಧವಾದುದೆಂದು ಆರೋಪಿಸಿ ರುವ ಭಾರತೀಯ ಜನತಾ ಪಕ್ಷದ ಕೊಡಗು ಜಿಲ್ಲಾ ಘಟಕ; ಈ ಅಧಿಸೂಚನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ; ಪ್ರತಿ ೧೦ ವರ್ಷಕ್ಕೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಿದ್ದು, ಇದುವರೆಗೆ ಕೇವಲ ೫ ಬಾರಿ ಮಾತ್ರ ಆಗಿದ್ದು, ನಂತರದಲ್ಲಿ ಯಾವದೇ ಸರಕಾರ ಕೂಡ ಮಾಡಿಲ್ಲ. ೨೦೦೨ರಲ್ಲಿ ಕೊನೆಯದಾಗಿ ಪರಿಷ್ಕರಣೆ ಆಗಿದ್ದು, ಇದೀಗ ಚುನಾವಣಾ ಆಯೋಗ ಸಂವಿಧಾನದ ಆಧಾರದಲ್ಲಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದೆ. ಕೆಲವು ನಿಯಮಗಳನ್ನು ಅಳವಡಿಸಿದ್ದು, ಅರ್ಹ ಭಾರತದ ಪ್ರಜೆಗಳು ಮತದಾನದ ಹಕ್ಕಿನಿಂದ ವಂಚಿತರಾಗದAತೆ ನೋಡಿಕೊಳ್ಳುವದಾಗಿದೆ. ಈ ಸಂಬAಧ ೧೧ ದಾಖಲೆಗಳನ್ನು ಕೂಡ ಕೇಳಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಆಧಾರ್ ಕಾರ್ಡ್ ಆಧಾರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿಕೊಳ್ಳಲು ಒತ್ತಾಯ ಮಾಡುತ್ತಿದ್ದು, ಅದು ಸಾಧ್ಯವಾಗುವದಿಲ್ಲ. ನಕಲಿ ಆಧಾರ್ ಕಾರ್ಡ್ ಬಳಸಿ ದಾಖಲೆಗಳ ದುರುಪಯೋಗವಾಗುವ ಸಾಧ್ಯತೆಯಿದೆ. ಈ ನಡುವೆ ರಾಜ್ಯ ಸರಕಾರ ಕೆಲ ದಿನಗಳ ಹಿಂದೆ ಅಧಿಸೂಚನೆಯೊಂದನ್ನು ಹೊರಡಿಸಿದ್ದು, ದಾಖಲೆ ಇಲ್ಲದವರಿಗೆ ತಹಶೀಲ್ದಾರರುಗಳ ಮೂಲಕ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಿದೆ. ಇದು ಸಂವಿಧಾನಕ್ಕೆ ವಿರುದ್ಧದಾಗಿದೆ ಎಂದು ಆರೋಪಿಸಿದರು.
ಈ ರೀತಿಯಾಗಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವದರಿಂದ ಅಕ್ರಮ ಬಾಂಗ್ಲಾ, ಪಾಕ್ ವಲಸಿಗರು ಕೂಡ ಪ್ರಮಾಣ ಪತ್ರ ಹೊಂದಿಕೊAಡು ಭಾರತದ ಪೌರತ್ವ ಪಡೆಯಲು ಅವಕಾಶ ನೀಡಿದಂತಾಗುತ್ತದೆ. ಚುನಾವಣಾ ಆಯೋಗದ ನೀತಿ, ನಿಯಮಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ಅಕ್ರಮ ವಲಸಿಗರು, ದೇಶದಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರವಾಗಿದೆ. ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗಲಿದ್ದು, ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡದೆ ಭಯೋತ್ಪಾದನೆ, ದೇಶವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡಲು ಹೊರಟಿದೆ ಎಂದು ಬೋಪಯ್ಯ ಗಂಭೀರ ಆರೋಪ ಮಾಡಿದರು. ಬೇರೆ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯೊಂದಿಗೆ ಚುನಾವಣೆ ಕೂಡ ನಡೆದಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಏಕೆ ಈ ರೀತಿಯ ಅಧಿಸೂಚನೆ ಹೊರಡಿಸುವ ಅಗತ್ಯವಿತ್ತು ಎಂದು ಪ್ರಶ್ನಿಸಿದ ಬೋಪಯ್ಯ, ಕೇಂದ್ರ ಗೃಹ ಸಚಿವಾಲಯ ಹಾಗೂ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಈಗಾಗಲೇ ಪಕ್ಷದ ರಾಜ್ಯ ಘಟಕದಿಂದ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ; ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಸಂಬAಧಿಸಿದAತೆ ಆರಂಭದಿAದಲೇ ಕಾಂಗ್ರೆಸ್ ಪಕ್ಷ ವಿರೋಧ ಮಾಡುತ್ತಲೇ ಬಂದಿದೆ. ಇಲ್ಲಿಯವರಲ್ಲದೆ, ಹೊರಗಿನಿಂದ ಬಂದವರು ಮತದಾರರ ಪಟ್ಟಿಯಿಂದ ಹೊರಹೋಗಲಿದ್ದಾರೆ ಎಂಬ ಉದ್ದೇಶದಿಂದ ವಿರೋಧ ಮಾಡುತ್ತಿರುವುದಾಗಿ ಆರೋಪಿಸಿದರು. ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪರಿಷ್ಕರಣೆಯಲ್ಲಿ ನಿಜವಾದ ಭಾರತೀಯನಿಗೆ ಮತದಾನದ ಹಕ್ಕು ದೊರಬೇಕೆಂಬದು ಬಿಜೆಪಿ ಪಕ್ಷದ ಉದ್ದೇಶವಾಗಿದೆ. ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವದರಿಂದ ನಿಜವಾದ ಭಾರತೀಯರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ, ಎಲ್ಲವೂ ವಲಸಿಗರ ಪಾಲಾಗಲಿದೆ. ಅಕ್ರಮ ವಲಸಿಗರು, ದೇಶದ ಭದ್ರತೆಗೆ ತೊಂದರೆ ಮಾಡುವವರನ್ನು ಮತದಾರರ ಪಟ್ಟಿಗೆ ಸೇರಿಸಿದರೆ ಅದು ದೇಶಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರಕಾರಕ್ಕೆ ಈ ಸಂದರ್ಭ ಅಧಿಸೂಚನೆ ಹೊರಡಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು; ಅಕ್ರಮ ವಲಸಿಗರಿಗೆ ಅವಕಾಶ ನೀಡಿ ರಾಜಕೀಯ ಲಾಭದಿಂದ ಅಧಿಕಾರ ಹಿಡಿಯುವ ಹುನ್ನಾರವಾಗಿದೆ. ಇದರಿಂದ ದೇಶದ ಭದ್ರತೆಗೆ, ಕೇಂದ್ರದ ಒಕ್ಕೂಟದ ವ್ಯವಸ್ಥೆಗೆ ತೊಂದರೆ ಆಗುತ್ತದೆ ಎಂಬ ಬಗ್ಗೆ ಕೂಡ ಚಿಂತನೆ ಇಲ್ಲ. ಅಧಿಸೂಚನೆ ರಾಜ್ಯಕ್ಕೆ ಮಾರಕ, ಇದಕ್ಕೆ ಅವಕಾಶ ಮಾಡಿಕೊಡದೆ ಹಿಂಪಡೆಯಬೇಕೆAದು ಆಗ್ರಹಿಸಿದರು. ಈ ಬಗ್ಗೆ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಮನು ಮಂಜುನಾಥ್, ವಕ್ತಾರ ಬಿ.ಕೆ. ಅರುಣ್ಕುಮಾರ್, ಮಾಧ್ಯಮ ಪ್ರಮುಖ್ ಶಜೀಲ್ ಕೃಷ್ಣ ಇದ್ದರು.