ಈಶಾನ್ವಿ
ವೀರಾಜಪೇಟೆ, ಜು. ೧೧: ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗುವುದು, ಮರ ಬಿದ್ದು ಫೀಡರ್ಗಳು ಹಾನಿಯಾಗುವುದು, ಟ್ರಾನ್ಸ್ಫಾರ್ಮರ್ಗಳಲ್ಲಿ ತಾಂತ್ರಿಕ ದೋಷ ಉಂಟಾಗುವುದು ದಿನನಿತ್ಯದ ಸಮಸ್ಯೆಯಾಗಿದೆ.
ಇಂತಹ ಸಂದರ್ಭದಲ್ಲಿ ಮನೆಯಿಂದ ಹೊರಬರಲೂ ನಾವು ಹಿಂಜರಿಯುತ್ತೇವೆ. ಈ ಸಂದರ್ಭ ಜೀವದ ಹಂಗು ತೊರೆದು ಮಳೆ-ಗಾಳಿ-ಗುಡುಗಿನ ಮಧ್ಯೆ ವಿದ್ಯುತ್ ಕಂಬ ಏರಿ ಬೆಳಕು ನೀಡುತ್ತಿರುವ ಚೆಸ್ಕಾಂ ಲೈನ್ಮ್ಯಾನ್ಗಳೇ ನಿಜವಾದ “ಮಳೆಗಾಲದ ಸೈನಿಕರು”.
ವೀರಾಜಪೇಟೆಯಲ್ಲಿ ಹೊಸ ವ್ಯವಸ್ಥೆ
ವಿದ್ಯುತ್ ದುರಸ್ತಿಗೆ ಬರುವ ಎಲ್ಲಾ ಕರೆಗಳು ಒಬ್ಬರಿಗೇ ಬರುತ್ತಿದ್ದರಿಂದ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮೇಶ್ ಅವರು ವೀರಾಜಪೇಟೆ ವ್ಯಾಪ್ತಿಯನ್ನು ೧೮ ಭಾಗಗಳಾಗಿ ವಿಂಗಡಿಸಿದ್ದಾರೆ.
ಪ್ರತಿ ಬಡಾವಣೆ, ಲೇಔಟ್ ಮತ್ತು ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕ ಲೈನ್ಮ್ಯಾನ್ ನಿಯೋಜಿಸಲಾಗಿದೆ. ಅಲ್ಲದೆ ಇಲಾಖೆಯಿಂದ ಲೈನ್ಮ್ಯಾನ್ಗಳಿಗೆ ಮೊಬೈಲ್ ಫೋನ್ ವಿತರಿಸಲಾಗಿದ್ದು, ಗ್ರಾಹಕರು ನೇರವಾಗಿ ತಮ್ಮ ಭಾಗದ ಲೈನ್ಮ್ಯಾನ್ಗೆ ಕರೆ ಮಾಡಿ ದೂರು ನೀಡಬಹುದು.
ಲೈನ್ಮ್ಯಾನ್ಗಳ ದಿನಚರಿ
ಬೆಳಿಗ್ಗೆ ೬ ಗಂಟೆಗೆ ಶುರುವಾಗುವ ಕೆಲಸ ರಾತ್ರಿ ೧೨ ದಾಟಿದರೂ ಮುಗಿಯುವುದಿಲ್ಲ. ಮಳೆಯಲ್ಲಿ ನೆನೆದು, ಜಾರುವ ಕಂಬ ಏರಿ, ೧೧,೦೦೦ ವೋಲ್ಟ್ ತಂತಿಯ ಜೊತೆ ಆಟವಾಡುವ ಕೆಲಸ ಇದು. ಒಂದು ಕ್ಷಣದ ಅಜಾಗರೂಕತೆ ಸಾಕು - ಪ್ರಾಣವೇ ಹೋಗಬಹುದು. “ಮಳೆ ಬಂದಾಗಿನಿAದ ದಿನಕ್ಕೆ ೫೦-೬೦ ಕರೆಗಳು ಬರುತ್ತಿವೆ. ಕೆಲವು ಕಡೆ ಮರ ಬಿದ್ದು ೪-೫ ಕಂಬಗಳು ಒಡೆದು ಹೋಗಿವೆ. ರಾತ್ರಿ ೨ ಗಂಟೆಗೂ ಹೋಗಿ ರಿಪೇರಿ ಮಾಡಿದ್ದೇವೆ” ಎಂದು ಒಬ್ಬ ಲೈನ್ಮ್ಯಾನ್ ಒಬ್ಬರು ತಿಳಿಸಿದರು.
ಗ್ರಾಹಕರಿಗೆ ಸೂಚನೆ
ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡರೆ, ಕಂಬ ಮುರಿದು ಬಿದ್ದರೆ, ತಂತಿ ರಸ್ತೆಗೆ ಬಿದ್ದರೆ ತಕ್ಷಣ ಸೋಮೇಶ್ ಅವರಿಗೆ ೯೪೪೮೨೨೯೪೦೯ ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಯಾವುದೇ ಸಮಯದಲ್ಲೂ ಚೆಸ್ಕಾಂ ಜನಸಹಾಯವಾಣಿ ೧೯೧೨ಗೆ ದೂರು ನೀಡಬಹುದು. “೨೪/೭ ನಮ್ಮ ಸಂಸ್ಥೆ ಗ್ರಾಹಕರ ಸೇವೆಗೆ ಸಿದ್ಧವಿದೆ. ಆದರೆ ಮಳೆಯ ಸಮಯದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಲೈನ್ಮ್ಯಾನ್ ಸ್ಥಳಕ್ಕೆ ಹೋಗಲು ೧-೨ ಗಂಟೆ ತಡವಾಗಬಹುದು. ಗ್ರಾಹಕರು ಸಹಕರಿಸಬೇಕು” ಎಂದು ಸೋಮೇಶ್ ಹೇಳಿದರು.
ಸಿಬ್ಬಂದಿ ಕೊರತೆ ಸವಾಲು
ಸಾಕಷ್ಟು ಸಿಬ್ಬಂದಿ ಇಲ್ಲದಿದ್ದರೂ ಇರುವ ಲೈನ್ಮ್ಯಾನ್ಗಳೇ ಪಾಳಿ-ಪಾಳಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೊಡಗಿನ ಬೆಟ್ಟ-ಹಳ್ಳ, ತೋಟ, ಕಾಫಿ ಎಸ್ಟೇಟ್ ಪ್ರದೇಶಗಳಲ್ಲಿ ಕಂಬ ಹುಡುಕಿಕೊಂಡು ಹೋಗುವುದೇ ದೊಡ್ಡ ಸಾಹಸ. ಕೆಲವು ಕಡೆ ವಾಹನ ಹೋಗುವುದಿಲ್ಲ. ಎರಡು ಕಿ.ಮೀ. ನಡೆಯುವ ಪರಿಸ್ಥಿತಿ ಇರುತ್ತದೆ.
ನಮ್ಮ ಜವಾಬ್ದಾರಿ
ನಾವು sಸ್ವಿಚ್ ಹಾಕಿ ಬೆಳಕು ಪಡೆಯುತ್ತೇವೆ. ಆದರೆ ಆ ಬೆಳಕಿಗಾಗಿ ಯಾರೋ ಒಬ್ಬ ತಾಯಿಯ ಮಗ ಮಳೆಯಲ್ಲಿ ನೆನೆದು, ಸಾವಿನ ಜೊತೆ ಆಟವಾಡುತ್ತಿರುತ್ತಾನೆ. ಹಾಗಾಗಿ ಅನಗತ್ಯ ಕರೆ ಮಾಡಿ ಕಾಡಿಸಬೇಡಿ. ತಂತಿ ತುಂಡಾದಾಗ ಹತ್ತಿರ ಹೋಗಬೇಡಿ. ಲೈನ್ಮ್ಯಾನ್ ಕೆಲಸ ಮಾಡುವಾಗ ಅವರಿಗೆ ಸಹಕರಿಸಿ.
ಟ್ರಾನ್ಸ್ಫಾರ್ಮರ್ ಮೇಲೆ ನಿಂತು ಕೆಲಸ ಮಾಡುವ ಯೋಧನಂತೆ ಸಾವಿರಾರು ಲೈನ್ಮ್ಯಾನ್ಗಳು ಕೊಡಗಿನಾದ್ಯಂತ ದುಡಿಯುತ್ತಿದ್ದಾರೆ. ಬೆಳಕನ್ನು ನೀಡಲು ಅವರು ಕತ್ತಲಲ್ಲಿ ದುಡಿಯುತ್ತಿದ್ದಾರೆ. ಮಳೆಗಾಲ ಮುಗಿಯುವವರೆಗೂ ಇವರ ಹೋರಾಟ ಮುಂದುವರಿಯಲಿದೆ.