ವೀರಾಜಪೇಟೆ, ಜು. ೭: ತಾಂತ್ರಿಕ ಶಿಕ್ಷಣ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳು ಕೌಶಲ್ಯವನ್ನು ರೂಢಿಸಿಕೊಂಡಾಗ ತಾವು ನಿರ್ವಹಿಸುವ ಉದ್ಯೋಗದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂದು ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ದಿವಾಕರ್ ಕೆ.ಜೆ. ಅಭಿಪ್ರಾಯಪಟ್ಟರು.

ಭಾಗಮಂಡಲದ ಕೆವಿಜಿ ಐಟಿಐ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಿವಾಕರ್ ಅವರು, ಸುಳ್ಯದ ಶಿಕ್ಷಣ ಬ್ರಹ್ಮ ವೆಂಕಟರಮಣ ಗೌಡರು ಭಾಗಮಂಡಲದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ೩೦ ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಿದರು. ಇದರ ಪ್ರಯೋಜನ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿಯೂ ಉದ್ಯೋಗದಲ್ಲಿದ್ದು ಕುಟುಂಬಕ್ಕೆ ಆಧಾರವಾಗಿದ್ದಾರೆ ಎಂದು ಹೇಳಿದರು.

ಕಾಲೇಜಿನ ಕಚೇರಿ ಅಧೀಕ್ಷಕರಾದ ವಿನೋದ್ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಶ್ರೀಕಾಂತ್ ಕೆ.ವಿ ಮಾತನಾಡಿ ಕುರುಂಜಿ ವೆಂಕಟ್ರಮಣ ಗೌಡ ಮತ್ತು ಅವರ ಕುಟುಂಬ ವರ್ಗದವರ ಶಿಕ್ಷಣದ ಬಗ್ಗೆ ಇದ್ದ ದೂರದೃಷ್ಟಿ ಇಂದು ಸಾವಿರಾರು ವಿದ್ಯಾರ್ಥಿಗಳ ಬಾಳನ್ನು ಹಸನುಗೊಳಿಸಿರುವುದಲ್ಲದೇ ನೂರಾರು ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ ಎಂದು ಹೇಳಿದರು.

ತಾಂತ್ರಿಕ ತರಬೇತಿ ಅಧಿಕಾರಿಗಳಾದ ವೇಣುಗೋಪಾಲ್, ಉದಯಕುಮಾರ್, ಪುನೀತ್ ಶುಭ ಹಾರೈಸಿದರು. ತರಬೇತಿ ಅಧಿಕಾರಿಗಳಾದ ಜಯಪ್ರಕಾಶ್ ಕೆ.ಜಿ ಪದ್ಮಕುಮಾರ್ ರೈ, ಕೃಷ್ಣಮೂರ್ತಿ ವೆಂಕಟೇಶ್, ಅರುಣ್ ಕೆ.ಟಿ ಉಪಸ್ಥಿತರಿದ್ದರು.