ಸೋಮವಾರಪೇಟೆ, ಜು. ೯: ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮ ಕಲಿಕೆ ಅನಿವಾರ್ಯವಾಗಿದ್ದರೂ ಸರಕಾರಿ ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅಭಿಪ್ರಾಯಿಸಿದರು.
ಶಾಲಾ ಶಿಕ್ಷಣ ಇಲಾಖೆ, ಕಾಜೂರು ಕ್ಲಸ್ಟರ್ ವತಿಯಿಂದ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರು ಹಾಗೂ ಸೇವೆಯಿಂದ ನಿವೃತ್ತರಾದ ಶಿಕ್ಷಕರಿಗೆ ಬೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಬಹುತೇಕ ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ.ಯಿಂದ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಪ್ರಾರಂಭಗೊAಡಿದೆ. ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಹಾಗೂ ನುರಿತ ಶಿಕ್ಷಕರು ಇದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಬೇಕೆAದು ಮನವಿ ಮಾಡಿದರು.
ನಿವೃತ್ತ ಶಿಕ್ಷಕರಾದ ಕಾಜೂರು ಸರಕಾರಿ ಪ್ರಾಥಮಿಕ ಶಾಲೆಯ ಅಜಿತ್ ಕುಮಾರ್ ಹಾಗೂ ಇಂದಿರಾ, ವರ್ಗಾವಣೆಗೊಂಡಿರುವ ಶಿಕ್ಷಕರುಗಳಾದ ಯಡವಾರೆ ಶಾಲೆಯ ವೈ.ಸಿ. ಕುಮಾರ್, ಕಿರಗಂದೂರು ಶಾಲೆಯ ಕೆಂಪರಾಜು, ಬೇಳೂರು ಶಾಲೆಯ ಸುಜಾತ ಇವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ. ಬಸವರಾಜು, ತಾಲೂಕು ಪ್ರಾಥಮಿಕ ಶಾಲೆಯ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ರಮೇಶ್, ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಯಶವಂತ ಕುಮಾರ್, ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸರಳ ಕುಮಾರಿ, ಬೇಳೂರು ಶಾಲೆಯ ಮುಖ್ಯ ಶಿಕ್ಷಕಿ ಎಸ್ತೆಲಾ ಡಿಸಿಲ್ವಾ, ಕಾಜೂರು ಕ್ಲಸ್ಟರ್ನ ಸಹ ಶಿಕ್ಷಕರು ಇದ್ದರು. ಸಿಆರ್ಪಿ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.