ಮಡಿಕೇರಿ, ಜು. ೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭವನ್ನು ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ, ಕೃಷಿ ಪ್ರಧಾನ ದೇಶದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ೫ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ “ಸಹಕಾರದಿಂದ ಸಮೃದ್ಧಿ” ಧ್ಯೇಯದೊಂದಿಗೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರೈತರ ಸಮಾವೇಶ, ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸಹಕಾರ ಅರಿವು, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಹಾಗೂ ಬಂಜೆತನ ನಿವಾರಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಸಮಾರೋಪದ ಅಂಗವಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ಬಾಲಭವನದ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ವಿದ್ಯಾರ್ಥಿಗಳ ಅಗತ್ಯತೆಗಳ ಬಗ್ಗೆ ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದ್ದು, ದಾನಿಗಳ ಸಹಕಾರದೊಂದಿಗೆ ನೆರವು ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಬೆಳ್ಳಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸುವಲ್ಲಿ ಬ್ಯಾಂಕ್ ಅಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶೈಲಜ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ, ಬಾಲಭವನ ಗೌರವ ಕಾರ್ಯದರ್ಶಿ ನಮಿತಾ ರೈ, ರೋಟರಿ ಮಾಜಿ ಅಧ್ಯಕ್ಷೆ ಲಲಿತಾ ರಾಘವನ್ ಉಪಸ್ಥಿತರಿದ್ದರು.
ಯೂನಿಯನ್ ಸಿಬ್ಬಂದಿ ಬಿ.ಸಿ. ಅರುಣ್ ಕುಮಾರ್, ಬಾಲಭವನದ ಸೌಮ್ಯ ಹಾಗೂ ಬಾಲಕರ ಬಾಲಮಂದಿರದ ಸೂರಜ್ ಕಾರ್ಯಕ್ರಮಕ್ಕೆ ಸಹಕರಿಸಿದರು.