ವೀರಾಜಪೇಟೆ, ಜು. ೯: ವೀರಾಜಪೇಟೆ ತಾಲೂಕು ಬಿಟ್ಟಂಗಾಲ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ನಿರಂತರವಾಗಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೇಸಿಗೆ ಕಾಲದಲ್ಲೂ ಕೂಡ ಸಮರ್ಪಕವಾಗಿ ವಿದ್ಯುತ್ ವಿತರಣೆ ಇಲ್ಲದೆ ಕಂಗಾಲಾಗಿದ್ದ ಈ ಭಾಗದ ಗ್ರಾಹಕರಿಗೆ ಮಳೆಗಾಲದಲ್ಲಿ ಕೂಡ ನಿರಂತರ ವಿದ್ಯುತ್ ಸರಬರಾಜು ಇಲ್ಲದೆ ಬವಣೆ ಪಡುವಂತಾಗಿದೆ. ಕಳೆದ ಮೂರು, ನಾಲ್ಕು ದಿನಗಳಿಂದ ಹಗಲು - ರಾತ್ರಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದೆ ಎಂದು ದೂರಿದ್ದಾರೆ.
ಈ ಭಾಗದಲ್ಲಿ ಪ್ರತ್ಯೇಕ ಫೀಡರ್ ವ್ಯವಸ್ಥೆ ಇಲ್ಲದೆ ಇರುವುದನ್ನು ಗಮನಿಸಿ ಕಳೆದ ಮೂರು ವರ್ಷಗಳ ಹಿಂದೆ ಗ್ರಾಮ ಬೆಳಕು ಯೋಜನೆಗೆ ಈ ಗ್ರಾಮವನ್ನು ಸೇರ್ಪಡೆಗೊಳಿಸಿ ಅಂದಿನ ಶಾಸಕರು ೪೫ ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದರು. ಆದರೆ ಇದುವರೆಗೂ ಕೂಡ ಅನುದಾನ ಸದ್ಬಳಕೆ ಆಗದೆ ಪ್ರತ್ಯೇಕ ಫೀಡರ್ ವ್ಯವಸ್ಥೆಯನ್ನು ಸಜ್ಜುಗೊಳಿಸಿಲ್ಲ. ಅಂದು ಬಿಡುಗಡೆಯಾದ ಹಣದ ಬಗೆ ಸಮರ್ಪಕ ಉತ್ತರ ಚೆಸ್ಕಾಂ ಅಧಿಕಾರಿಗಳಿಂದಲೂ ಕೂಡ ಬರುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಟ್ಟಂಗಾಲ ಇದೀಗ ಬೆಳೆಯುತ್ತಿರುವ ಪ್ರದೇಶವಾಗಿದ್ದು, ರಾಜ್ಯ ಹೆದ್ದಾರಿ ಒಳಗೊಂಡಿದ್ದರಿAದ ಹಲವು ವಾಣಿಜ್ಯ ಚಟುವಟಿಕೆಗಳು, ಸಣ್ಣ ಕೈಗಾರಿಕೆಗಳು, ಶಾಲಾ - ಕಾಲೇಜುಗಳು, ಆಸ್ಪತ್ರೆ ಇಲ್ಲಿ ಸ್ಥಾಪಿತವಾಗಿದ್ದು ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲದೆ ವಾಣಿಜ್ಯ ಚಟುವಟಿಕೆಗಳಿಗೂ ಕೂಡ ಬರೆ ಬಿದ್ದಂತಾಗಿದೆ. ಕೂಡಲೇ ಅಧಿಕಾರಿಗಳು ಈ ಭಾಗದ ವಿದ್ಯುತ್ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.