ಕಣಿವೆ, ಜು. ೯: ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಂಡಿರುವ ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿ ರೋಗ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕಿನ ಹೆಬ್ಬಾಲೆ, ತೊರೆನೂರು, ಹುಲುಸೆ, ಚಿಕ್ಕಅಳುವಾರ ಮೊದಲಾದ ಗ್ರಾಮಗಳ ಬಹುತೇಕ ರೈತರು ನಷ್ಟಕ್ಕೆ ತುತ್ತಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಪಿ. ವೀರಣ್ಣ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು. ಈ ರೋಗವು ಬಿತ್ತನೆ ಬೀಜ, ಮಣ್ಣು ಹಾಗೂ ವಾತಾವರಣದ ಮೂಲಕ ಹರಡುವ ರೋಗವಾಗಿದೆ. ಜೋಳ ಬೆಳೆದ ಕೃಷಿಕರು ಬಿತ್ತನೆಗೆ ಮುನ್ನಾ ಕೆ.ಜಿ.ಯೊಂದರ ಬೀಜಕ್ಕೆ ೩.೦ ಗ್ರಾಂ ಮೆಟಲಾಕ್ಸಿಲ್, ಶೇ. ೮ ಹಾಗೂ ಮ್ಯಾಂಕೊಜೆಬ್ ಶೇ. ೬೪ ರಷ್ಟು ಸಂಯುಕ್ತ ಶಿಲೀಂದ್ರ ನಾಶಕದಿಂದ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಬಿತ್ತನೆಯಾದ ೧೫ ರಿಂದ ೨೦ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೆಟಲಾಕ್ಸಿಲ್ ಶೇ. ೮, ಮ್ಯಾಂಕೋಜೆಬ್ ಶೇ. ೬೪, ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ೨ ಗ್ರಾಂ ನಷ್ಟು ಬೆರೆಸಿ ಸಿಂಪಡಿಸಬೇಕು. ಮತ್ತೆ ೨೫ ರಿಂದ ೩೦ ದಿನಗಳ ಅಂತರದಲ್ಲಿ ರೋಗ ಲಕ್ಷಣ ಆಧರಿಸಿ ಅಜಾಕ್ಸಿಸ್ಟೋಬಿನ್ ಶೇ. ೧೮.೨, ಡಿಫೆನೋಕೊನಾಜೋಲ್ ಶೇ. ೧೧.೪ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.