ಕುಶಾಲನಗರ, ಜು. ೮: ನೊಬೆಲ್ ಪುರಸ್ಕೃತ, ಟಿಬೆಟಿಯನ್ ನಾಗರಿಕರ ನಡೆದಾಡುವ ದೈವ ೧೪ನೇ ದಲೈಲಾಮ ಅವರ ೯೧ನೇ ಹುಟ್ಟುಹಬ್ಬ ಆಚರಣೆ ಬೈಲುಕುಪ್ಪೆ ನಿರಾಶ್ರಿತ ಟಿಬೆಟಿಯನ್ ಶಿಬಿರದಲ್ಲಿ ನಡೆಯಿತು. ಹುಟ್ಟು ಹಬ್ಬದ ಅಂಗವಾಗಿ ಬೈಲುಕುಪ್ಪೆ ಟಿಬೆಟಿಯನ್ ಶಿಬಿರದಲ್ಲಿ ವಿಶೇಷ ಧಾರ್ಮಿಕ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು.

ಮಿಡಲ್ ವೇ ಟಿಬೆಟಿಯನ್ ಯೂತ್ ಕಾಂಗ್ರೆಸ್ ಮತ್ತು ಟಿಬೆಟಿಯನ್ ರೀಜನಲ್ ವಿಮೆನ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಟಿಬೆಟಿಯನ್ ಧಾರ್ಮಿಕ ಕೇಂದ್ರಗಳ ಬೌದ್ಧ ಗುರುಗಳು, ಟಿಬೆಟಿಯನ್ ಆಡಳಿತದ ಜನಪ್ರತಿನಿಧಿಗಳು, ಬೌದ್ಧ ಬಿಕ್ಷುಗಳು ಮತ್ತು ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಲೈಲಾಮ ಅವರಿಗೆ ಹೆಚ್ಚಿನ ಆರೋಗ್ಯ ಆಯುಷ್ಯ ಲಭಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು. ಈ ಸಂದರ್ಭ ಹಿರಿಯ ಧಾರ್ಮಿಕ ಗುರುಗಳು, ಪ್ರಮುಖರಾದ

ಡೋಲ್ಮಾ ನಾಮಗೆಲ್, ನೀಮ ಗ್ಯಾಲ್ಪೋ ಮತ್ತಿತರರು ಇದ್ದರು. ಟಿಬೆಟನ್ ರೀಜನಲ್ ವಿಮೆನ್ ಅಸೋಸಿಯೇಷನ್ ಪ್ರತಿನಿಧಿಗಳು ಹುಟ್ಟು ಹಬ್ಬದ ಅಂಗವಾಗಿ ಬೈಲುಕುಪ್ಪೆ ಕೊಪ್ಪ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಿದರು. ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ದಲೈಲಾಮ ಅವರ ಹುಟ್ಟು ಹಬ್ಬದ ಪ್ರಯುಕ್ತ ಟಿಬೆಟಿಯನ್ ವಿಮೆನ್ ಅಸೋಸಿಯೇಷನ್ ಪ್ರತಿನಿಧಿಗಳಿಗೆ ಗಿಡವನ್ನು ನೀಡಿ ಶುಭ ಕೋರಲಾಯಿತು.