ಹೆಬ್ಬಾಲೆ, ಜು. ೮: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊAಡ ಎಲ್.ಕೆ.ಜಿ.,ಮತ್ತು ಯು.ಕೆ.ಜಿ ತರಗತಿಗಳಿಗೆ ಹಾಗೂ ರೂ.೨೦ ಲಕ್ಷ ವೆಚ್ಚದಲ್ಲಿ ಮೈದಾನದಲ್ಲಿ ಕ್ರೀಡಾ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಶಾಸಕ ಮಂತರ್ ಗೌಡ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರಿಗೆ ತಮ್ಮ ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿತ್ತು. ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಆದರೆ ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಶುರುವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊAಡಿದ್ದು, ಇದರಿಂದ ಮಕ್ಕಳ ಆರಂಭಿಕ ಶಿಕ್ಷಣ ಇನ್ನು ಮುಂದೆ ಮತ್ತಷ್ಟು ಸುಲಭ, ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ್ದಾಗಲಿದೆ.ಇದಕ್ಕೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ್, ಹಾಲಿನ ಡೈರಿಯ ಅಧ್ಯಕ್ಷ ನಾರಾಯಣ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಮೂರ್ತಿ, ಸಹಾಯಕ ಎಂಜಿನಿಯರ್ ಕೀರ್ತನ್, ಪಿಡಿಓ ರವಿಕುಮಾರ್, ಮುಖಂಡರಾದ ಎಚ್.ಟಿ.ದಿನೇಶ್, ಮಂಜುನಾಥ್, ರವಿಕುಮಾರ್, ಎಸ್‌ಆರ್. ಮಂಜುನಾಥ್, ಶಿಕ್ಷಕರಾದ ಬಬಿತ, ವಂಜಮ್ಮ ಶಿವಾನಂದ, ರಮ್ಯ, ಪ್ರತಿಮಾ, ಆಯಾ, ನೇತ್ರಾವತಿ ಪಾಲ್ಗೊಂಡಿದ್ದರು.

ಇದೇ ಸಂದರ್ಭ ತಾಲೂಕು ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿ ರೂ. ೫ ಲಕ್ಷದಲ್ಲಿ ನಿರ್ಮಾಣಗೊಂಡಿದ್ದ ಶೌಚಾಲಯವನ್ನು ಶಾಸಕರು ಉದ್ಘಾಟಿಸಿದರು. ಹಳಕೋಟೆ, ಹೊಸಕೋಟೆ ರಸ್ತೆ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.