ಮಡಿಕೇರಿ, ಜು. ೮: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆಯು ಕೊಡಗು ಜಿಲ್ಲೆಯಲ್ಲಿ ಮಳೆ-ಗಾಳಿಯ ನಡುವೆಯೂ ಬಿರುಸಿನಿಂದಲೇ ನಡೆಯುತ್ತಿದ್ದು, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಸೇರಿ ತಾ. ೭ ರವರೆಗಿನ ಮಾಹಿತಿ ಪ್ರಕಾರ ಒಟ್ಟು ಮತದಾರರ ಪೈಕಿ ಶೇ.೮೩.೨೩ ರಷ್ಟು ಮತದಾರರಿಗೆ ನಮೂನೆ ವಿತರಣೆ ಆಗಿದೆ.

ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದ ಒಟ್ಟು ೫೫೨ ಮತಗಟ್ಟೆಗಳ ಬೂತ್‌ಮಟ್ಟದ ಅಧಿಕಾರಿಗಳು ಜೂ. ೩೦ ರಿಂದಲೇ ಮನೆ-ಮನೆಗೆ ಭೇಟಿ ನೀಡಿ ಮತದಾರರ ಸಮಗ್ರ ಪರಿಷ್ಕರಣೆ(ಎಸ್.ಐ.ಆರ್)ಯ ನಮೂನೆಗಳನ್ನು ವಿತರಿಸಲಾರಂಭಿಸಿದ್ದಾರೆ. ನಂತರ ಅವುಗಳನ್ನು ಭರ್ತಿ ಮಾಡುವ ವಿಧಾನವನ್ನು ಸಹ ಮತದಾರರಿಗೆ ವಿವರಿಸುತ್ತಿದ್ದಾರೆ.

ಕೊಡಗಿನಲ್ಲಿನ ೨ ಕ್ಷೇತ್ರಗಳಲ್ಲಿ ಒಟ್ಟು ೪ ಲಕ್ಷ ೬೮ ಸಾವಿರ ೬೫೭ ಮತದಾರರಿದ್ದಾರೆ. (ಮಡಿಕೇರಿಯಲ್ಲಿ ೨ ಲಕ್ಷ ೩೮ ಸಾವಿರ ೪೪೭ ಹಾಗೂ ವೀರಾಜಪೇಟೆಯಲ್ಲಿ ೨ ಲಕ್ಷ ೩೦ ಸಾವಿರ ೨೧೦ ಮತದಾರರು). ಈ ಪೈಕಿ ೩ ಲಕ್ಷ ೯೦ ಸಾವಿರದ ೭೦ ಎಸ್.ಐ.ಆರ್ ನಮೂನೆಗಳನ್ನು ಮತದಾರರ ಮನೆ-ಮನೆಗೆ ಭೇಟಿ ನೀಡಿ ಬಿ.ಎಲ್.ಓಗಳು ವಿತರಿಸಿದ್ದಾರೆ. ಈ ಮೂಲಕ ಒಟ್ಟು ಶೇ.೮೩.೨೩ ರಷ್ಟು ಸಾಧನೆ ಆಗಿದೆ. ಮಡಿಕೇರಿ ಕ್ಷೇತ್ರದಲ್ಲಿ ೨ ಲಕ್ಷ ಒಂಭತ್ತು ಸಾವಿರದ ೭೮೧ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೧ ಲಕ್ಷ ೮೦ ಸಾವಿರದ ೨೮೯ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನಮೂನೆಗಳು ವಿತರಣೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇ.೩.೪೧ ರಷ್ಟು ಮಾತ್ರ ಡಿಜಿಟೈಸ್ಡ್

ಶೇ.೮೩.೨೩ ರಷ್ಟು ಪ್ರಮಾಣದಲ್ಲಿ ನಮೂನೆಗಳು ವಿತರಣೆಯಾಗಿದ್ದರೂ ಇವುಗಳನ್ನು ಮತದಾರರು ಸರಿಯಾಗಿ ಭರ್ತಿ ಮಾಡಿ ಬಿ.ಎಲ್.ಓಗಳಿಗೆ ವಿತರಣೆ ಮಾಡುವುದು ಅಗತ್ಯವಿದೆ. ಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಳ್ಳುವ ಅಗತ್ಯವಿದೆ. ಮತದಾರರಿಗೆ ವಿತರಣೆಯಾಗಿರುವ ಒಟ್ಟು ೩ ಲಕ್ಷ ೯೦ ಸಾವಿರದ ೭೦ ನಮೂನೆಗಳ ಪೈಕಿ ೧೫ ಸಾವಿರದ ೯೬೧ ನಮೂನೆಗಳಷ್ಟೆ (ಶೇ.೩.೨೧ ರಷ್ಟು) ಬಿ.ಎಲ್.ಓಗಳಿಂದ ಆನ್‌ಲೈನ್ ಅಪ್‌ಲೋಡ್ (ಡಿಜಿಟೈಸ್ಡ್) ಮಾಡಲಾಗಿದೆ. ಆನ್‌ಲೈನ್ ಅಪ್‌ಲೋಡ್ ಆಗುವ ನಮೂನೆಗಳು ಅಧಿಕೃತ ಡಿಜಿಟಲ್ ಡಾಟಾಬೇಸ್‌ನಲ್ಲಿ ದಾಖಲಾಗಿವೆ.

೪೪೮ ಹೆಸರುಗಳು ಡಿಲೀಟ್

ಇದುವರೆಗೆ ನಡೆದಿರುವ ಬಿ.ಎಲ್.ಓ ಭೇಟಿ ಸಂದರ್ಭ ೧೫ ಮತದಾರರು ತಮ್ಮ ನಿವಾಸದಲ್ಲಿ ಇಲ್ಲವಾಗಿದ್ದು (ಬಿ.ಎಲ್.ಓಗಳು ಒಟ್ಟು ೩ ಬಾರಿ ತೆರಳಲು ಅವಕಾಶವಿದೆ), ೧೧೩ ಮಂದಿ ಇತರೆಡೆಗೆ ಸ್ಥಳಾಂತರಗೊAಡಿರುವುದಾಗಿ ತಿಳಿದುಬಂದಿದೆ. ಒಟ್ಟು ೨೭೫ ಮಂದಿ ಮೃತಪಟ್ಟವರ ಹೆಸರು ಕೂಡ ಮತದಾರರ ಪಟ್ಟಿಯಲ್ಲಿದ್ದು, ಅವು ಈಗ ಡಿಲೀಟ್ ಆಗಲಿವೆ. ೪೨ ಮತದಾರರು ನಕಲಿ (ಒಬ್ಬರದ್ದೇ ಹೆಸರು ಎರಡು ಬಾರಿ) ಎಂಬುದಾಗಿ ತಿಳಿದುಬಂದಿದೆ. ೩ ಹೆಸರುಗಳು ಇತರೆ ಕಾರಣಗಳಿಂದ ಅನರ್ಹವಾಗಿವೆ. ಸದ್ಯದ ಮಟ್ಟಿಗೆ ಒಟ್ಟು ೪೪೮ ಮಂದಿಯ ಹೆಸರುಗಳು ಪಟ್ಟಿಯಿಂದ ತೆರೆಯಲ್ಪಡಲಾಗುವುದು. ಆನ್‌ಲೈನ್ ಮೂಲಕವೂ ಎಸ್.ಐ.ಆರ್ ಭರ್ತಿ ಮಾಡುವ ಸೌಲಭ್ಯವಿದ್ದು, ಜಿಲ್ಲೆಯಲ್ಲಿ ೬೦೯ ಮಂದಿ ಈ ಸೌಲಭ್ಯ ಬಳಸಿಕೊಂಡಿದ್ದಾರೆ.