ಕೂಡಿಗೆ, ಜು. ೮: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಿಇಟಿ ಹಾಗೂ ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಥವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ವಿಜ್ಞಾನ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಆಯೋಜಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಕೊಡಗು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಾಗಾರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ. ಗಣಪತಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸಿಇಟಿ ಹಾಗೂ ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ವಿಜ್ಞಾನ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡುತ್ತಿದೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ಉಪನ್ಯಾಸಕರು ತಿಳಿಸುವ ವಿಷಯಗಳನ್ನು ಪರಿಣಾಮಕಾರಿಯಾಗಿ ಅಳವಡಿ ಸಿಕೊಂಡು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.
ನೋಡಲ್ ಅಧಿಕಾರಿ ಹಾಗೂ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದು, ವಿಜ್ಞಾನ ವಿಭಾಗದತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚುತ್ತಿದೆ. ಅವರಿಗೆ ಸಿಇಟಿ ಹಾಗೂ ನೀಟ್‌ಗೆ ಗುಣಮಟ್ಟದ ತರಬೇತಿ ನೀಡಿದರೆ ಸರ್ಕಾರಿ ಕಾಲೇಜುಗಳು ಉತ್ತಮ ಫಲಿತಾಂಶ ದಾಖಲಿಸಿ ಹೆಸರು ಗಳಿಸಬಹುದು ಎಂದು ಹೇಳಿದರು.
ಸಂಪನ್ಮೂಲ ಉಪನ್ಯಾಸಕಿ ದಮಯಂತಿ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಉಪನ್ಯಾಸಕರ ಬೋಧನಾ ಸಾಮರ್ಥ್ಯ ಹಾಗೂ ವೃತ್ತಿ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತವೆ. ಇದರ ಮೂಲಕ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಾಗಾರದಲ್ಲಿ ಡಯಟ್ ಸಂಸ್ಥೆಯ ನೋಡಲ್ ಅಧಿಕಾರಿ ಹೇಮಂತ್ ರಾಜ್ ಉಪಸ್ಥಿತರಿದ್ದರು. ಸಂಪನ್ಮೂಲ ಉಪನ್ಯಾಸಕ ಮೋಹನ್ ಸ್ವಾಗತಿಸಿದರು. ಸಂಪನ್ಮೂಲ ಉಪನ್ಯಾಸಕಿ ಕೆ.ಎನ್. ಪಲ್ಲವಿ ವಂದಿಸಿದರು. ಉಪನ್ಯಾಸಕ ಎಸ್.ಎಚ್. ಈಶ ಕಾರ್ಯಕ್ರಮ ನಿರೂಪಿಸಿದರು.