ಕುಶಾಲನಗರ, ಜು. ೮: ಕುಶಾಲನಗರ ಪುರಸಭೆ ವತಿಯಿಂದ ಒಳಚರಂಡಿ ಯೋಜನೆಯ ಸಂಪರ್ಕಕ್ಕೆ ದರ ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದ್ದು, ರದ್ದುಗೊಳಿಸಿ ಹೊಸ ದರ ನಿಗದಿಪಡಿಸುವಂತೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಒತ್ತಾಯ ಮಾಡಿದೆ.
ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದಿಂದ ಯುಜಿಡಿ ಕಾಮಗಾರಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಒದಗಿದೆ. ಸರ್ಕಾರಕ್ಕೆ ಈಗಾಗಲೇ ಹಲವು ರೀತಿಯ ತೆರಿಗೆಯನ್ನು ನೀಡುತ್ತಿರುವ ನಡುವೆ ಹೆಚ್ಚಿನ ತೆರಿಗೆ ಕಟ್ಟಬೇಕೆನ್ನುವುದು ಗಾಯದ ಮೇಲೆ ಬರೆ ಎಳೆದಂತೆ ಎಂಬAತಾಗಿದೆ ಎಂದು ಚರ್ಚೆ ನಡೆಯಿತು.
ಈಗ ನಡೆದಿರುವ ಯುಜಿಡಿ ಕಾಮಗಾರಿ ಕಳಪೆಯಾಗಿದೆ. ಹಲವು ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಮ್ಯಾನ್ಹೋಲ್ಗಳು ಈಗಾಗಲೇ ಶಿಥಿಲಗೊಂಡಿವೆ. ಅಳವಡಿಸಿರುವ ಪೈಪ್ ಕೂಡ ಚಿಕ್ಕದಾಗಿದೆ, ತ್ಯಾಜ್ಯಗಳು ಸರಾಗವಾಗಿ ಹರಿಯಲು ಸಾಧ್ಯವಿಲ್ಲವೆಂದು ಆತಂಕ ವ್ಯಕ್ತಗೊಂಡಿತು.
ಚೇAಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಕುಶಾಲನಗರ ಪುರಸಭೆಯಲ್ಲಿ ಈಗಿರುವ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಊರಿನ ಮೇಲಿನ ಕಾಳಜಿ, ಜನರಪರವಾದ ನಮ್ಮ ಬೇಡಿಕೆಯನ್ನು ಖಂಡಿತ ಈಡೇರಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿ, ಅದು ಸಾಧ್ಯವಾಗದೇ ಇದ್ದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ನಮ್ಮ ಬೇಡಿಕೆಯನ್ನು ಸಲ್ಲಿಸೋಣ ಎಂದು ಸಲಹೆ ನೀಡಿದರು.
ಕುಶಾಲನಗರ ಪುರಸಭೆಯ ಆಡಳಿತಾಧಿಕಾರಿಯೊಂದಿಗೆ ಚರ್ಚಿಸಿ, ಜನರ ಆಶಯದಂತೆ ಯುಜಿಡಿ ಸಂಪರ್ಕಕ್ಕೆ ಮಾತ್ರ ಮನೆ, ವಾಣಿಜ್ಯ ಕಟ್ಟಡಗಳಿಗೆ ವಿವಿಧ ರೀತಿಯಲ್ಲಿ ಅಂದರೆ ೫೦೦ ರೂಪಾಯಿಯಿಂದ ೨೦೦೦ ರೂಪಾಯಿ ತನಕ ಹಣ ಸಂದಾಯ ಮಾಡಬಹುದು. ಪ್ರತಿ ವರ್ಷ ನಿರ್ವಹಣಾ ವೆಚ್ಚವನ್ನು ಕಟ್ಟಲು ವಿರೋಧವಿದೆ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.
ಸಭೆಯ ತೀರ್ಮಾನದಂತೆ ಆಡಳಿತಾಧಿಕಾರಿ ನಿತಿನ್ ಚೆಕ್ಕಿ ಅವರಿಗೆ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೂ ಮನವಿ ಪತ್ರ ನೀಡಲಾಗುವುದು ಎಂದು ನಾಗೇಶ್ ತಿಳಿಸಿದರು. ಚೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ ಚಿತ್ರ ರಮೇಶ್ ಖಜಾಂಚಿ ಎನ್.ವಿ.ಬಾಬು, ಸದಸ್ಯರಾದ ಬಶೀರ್, ನಾಸಿರ್, ಅರ್ಜುನ್ ಗುಪ್ತ, ಪ್ರಶಾಂತ್, ರಮೇಶ್ ಇದ್ದರು.