ಚೆಯ್ಯಂಡಾಣೆ, ಜು. ೭: ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ.
ನಾಲಡಿ ಗ್ರಾಮದ ನಿವಾಸಿ ಬೆಳೆಗಾರ ಪರದಂಡ ಡಾಲಿ ಎಂಬವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಿಗ್ಗೆ ಕಾಡಾನೆ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಾಡಾನೆ ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತೋಟದ ಮಾಲೀಕ ಡಾಲಿ ಅವರ ಕಾರ್ಮಿಕರು ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದಾಗ ಕಾಡಾನೆ ಮೃತದೇಹ ಕಂಡುಬAದಿದೆ.
ಕಳೆದ ಹಲವು ವರ್ಷಗಳಿಂದ ಈ ಗ್ರಾಮ ವ್ಯಾಪ್ತಿಯ ಬೆಳೆಗಾರರ ತೋಟಗಳಲ್ಲಿ ಕಾಡಾನೆಗಳು ಹಾವಳಿ ನಡೆಸುತ್ತಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಾನೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾಮದ ನಿವಾಸಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ತಿಳಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.