ಮುಳ್ಳೂರು, ಜು. ೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಸಮೀಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ವಾಸ್ಥö್ಯ ಸಂಕಲ್ಪ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಭಿಮನ್ಯು ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮವು ಒಂದಾಗಿದೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಈ ಮೂಲಕವಾಗಿ ವಿದ್ಯಾರ್ಥಿಗಳು, ಯವ ಜನಾಂಗ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಮಾಹಿತಿ ನೀಡಿ, ಸ್ವಾಸ್ಥö್ಯ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಆದರೆ ಇಂದು ಹೆಚ್ಚಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತವಾಗಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಜೀವನಕ್ಕೆ ಮಾರಕವಾಗುವ ಬಗ್ಗೆ ಅರಿವು ಮೂಡಿಸುವುದ್ದರಿಂದ ದುಶ್ಟಟಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಸುಚಿತ್ರ, ಗೋಲ್ಡನ್ ಶಾಲಾ ಮುಖ್ಯ ಶಿಕ್ಷಕ ಷಣ್ಮುಖಯ್ಯ, ಪ.ಪೂ. ಕಾಲೇಜು ಪ್ರಾಂಶುಪಾಲ ಮಹಮ್ಮದ್ ಜಾಹಿರ್, ಪೊಲೀಸ್ ಸಿಬ್ಬಂದಿ ಕೇಶವಮೂರ್ತಿ, ಜನಜಾಗೃತಿ ವೇದಿಕೆ ಸದಸ್ಯೆ ಪೂರ್ಣಿಮಾ, ತಾಲೂಕು ಆತಂರಿಕ ಲೆಕ್ಕ ಪರಿಶೋಧಕಿ ರೂಪ, ವಲಯ ಮೇಲ್ವಿಚಾರಕ ಅಚ್ಯುತ, ಸೇವಾ ಪ್ರತಿನಿಧಿ ಎಸ್.ಆರ್. ಶೋಭ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.