ಮಡಿಕೇರಿ, ಜು. ೭: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿನ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಪೂರ್ಣಗೊಂಡ ಹಿನ್ನೆಲೆ ದೇಗುಲದಲ್ಲಿ ನಾಲ್ಕು ದಿನಗಳ ದೈವಿಕ ಕಾರ್ಯಗಳಿಗೆ ನಿನ್ನೆ ಸಂಜೆ ಚಾಲನೆ ದೊರೆಯಿತು.
ಪುನರ್ ರಚನೆಗೊಂಡ ನೂತನ ಗರ್ಭಗುಡಿಯಲ್ಲಿ ದೇವರ ಬಿಂಬ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. ೯ ರ ತನಕ ಜರುಗಲಿದೆ. ಶ್ರೀ ನೀಲೇಶ್ವರ ಉಚ್ಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಈ ದಿನಗಳಲ್ಲಿ ವಿವಿಧ ಕೈಂಕರ್ಯ, ಪೂಜಾ ವಿಧಿವಿಧಾನಗಳು ನಡೆಯಲಿವೆ.
ಸೋಮವಾರ ಸಂಜೆ ನಡೆದ ಕಾರ್ಯದಲ್ಲಿ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಗಳವಾರವೂ ವಿವಿಧ ಪೂಜೆಗಳು ನಡೆದಿದ್ದು, ತಾ. ೮ ಹಾಗೂ ೯ ರಂದು ಮುಂದುವರಿಯಲಿದೆ. ತಾ. ೯ ರಂದು ಮುಖ್ಯ ಕಾರ್ಯ ನಡೆಯಲಿದೆ. ಈ ದಿನಗಳಲ್ಲಿ ದೇವಾಲಯದಲ್ಲಿ ನಿತ್ಯದ ಪೂಜೆಗಳು ಸಾರ್ವಜನಿಕರಿಗೆ ಇರುವುದಿಲ್ಲ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.