ಕೊಡ್ಲಿಪೇಟೆ, ಜು. ೭: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ಸರಸ್ವತಿ ಪೂಜೆ, ಅಕ್ಷರಾಭ್ಯಾಸ ಹಾಗೂ ‘ಯೆಲ್ಲೋ ಡೇ' ಕಾರ್ಯಕ್ರಮ ಜರುಗಿತು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಹೊಸದಾಗಿ ಶಾಲೆಗೆ ಹೆಜ್ಜೆ ಇಟ್ಟ ಎಲ್‌ಕೆಜಿ ಮಕ್ಕಳಿಗೆ ಸಾಂಪ್ರದಾಯಿಕವಾಗಿ ಅಕ್ಷರ ಅಭ್ಯಾಸ, ಯುಕೆಜಿ ಮಕ್ಕಳಿಗೆ ಆಕರ್ಷಕ ಬಣ್ಣಗಳ ‘ಯೆಲ್ಲೋ ಡೇ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಿ.ಎನ್. ವಸಂತ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲದೆ, ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಯೊಂದು ಸುಪ್ತ ಕಲೆ ಮತ್ತು ಪ್ರತಿಭೆಗೆ ಪೋಷಕರು ಹಾಗೂ ಶಿಕ್ಷಕರು ಸೂಕ್ತ ವೇದಿಕೆ ಮತ್ತು ಅವಕಾಶಗಳನ್ನು ಮಾಡಿಕೊಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ಎಲ್‌ಕೆಜಿ ಮಕ್ಕಳಿಗೆ ಸಾಂಪ್ರದಾಯಿಕವಾಗಿ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ಜ್ಞಾನದೀಪ ಬೆಳಗಿಸಿ, ಆಶೀರ್ವಚನ ನೀಡಿದರು.

‘ಯೆಲ್ಲೋ ಡೇ' ಅಂಗವಾಗಿ ಹಳದಿ ಬಣ್ಣದ ಸುಂದರ ಉಡುಪುಗಳನ್ನು ಧರಿಸಿ ಬಂದಿದ್ದ ಯುಕೆಜಿ ಪುಟಾಣಿಗಳಿಂದ ಆಕರ್ಷಕ ನೃತ್ಯ, ಗಾಯನ ಹಾಗೂ ಪುಟ್ಟ ಭಾಷಣ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಮಮತಾ, ಎಲ್‌ಕೆಜಿ ಕಮಿಟಿ ಅಧ್ಯಕ್ಷ ಕೆಂಚೇಶ್ವರ, ಶಾಲಾ ಮುಖ್ಯ ಶಿಕ್ಷಕಿ ಆಶಾ ಹಾಗೂ ಶಿಕ್ಷಣ ತಜ್ಞೆ ಮಮತಾ ರವಿರಾಜ್ ಉಪಸ್ಥಿತರಿದ್ದರು.

ಶಿಕ್ಷಕಿ ಶ್ವೇತಾ, ಬಲ್ಕಿಸ್, ಶಾಲಾ ಸಿಬ್ಬಂದಿ ಶೋಭಾ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಡಿಎಂಸಿಯ ಸದಸ್ಯರು, ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.