ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೭: ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ವ್ಯವಹಾರ ರದ್ದಾದರೆ ಮುಂಗಡವಾಗಿ ಪಾವತಿಸಿರುವ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಮರುಪಾವತಿ ಮಾಡುವಂತೆ ಕೋರುವ ಮನವಿಯನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ವಿಳಂಬದ ನೆಪವೊಡ್ಡಿ ಮರುಪಾವತಿ ಅರ್ಜಿಯನ್ನು ತಿರಸ್ಕರಿಸಿದ್ದ ಜಿಲ್ಲಾ ನೋಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಬೆಳಗಾವಿಯ ಗೋಪಾಲರಾವ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ಮನವಿಯನ್ನು ಮುಂದಿನ ಎಂಟು ವಾರಗಳೊಳಗೆ ಮರು ಪರಿಶೀಲಿಸುವಂತೆ ಆದೇಶಿಸಿದೆ.

ಕರ್ನಾಟಕ ಮುದ್ರಾಂಕ ಕಾಯ್ದೆ ೧೯೫೭ರ ಸೆಕ್ಷನ್ ೫೨ಎ ಅಡಿಯಲ್ಲಿ ಶುಲ್ಕ ಮರುಪಾವತಿ ಕೋರಲು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಲಾಗಿಲ್ಲ. ಅಧಿಕಾರಿಗಳು ಯಾವುದೇ ಕಾನೂನು ಅಥವಾ ಸುತ್ತೋಲೆಯ ಆಧಾರವಿಲ್ಲದೆ ಸ್ವಯಂಪ್ರೇರಿತವಾಗಿ ಒಂದು ವರ್ಷದ ಕಾಲಮಿತಿ ಹೇರಿರುವುದು ಕಾನೂನುಬಾಹಿರವಾಗಿದೆ. ಅಲ್ಲದೆ, ಕರ್ನಾಟಕ ನೋಂದಣಿ ನಿಯಮಗಳು ೧೯೬೫ರ ನಿಯಮ ೧೯೩ರ ಪ್ರಕಾರ, ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳುವ ಮುನ್ನ ತಾನು ಮಂಡಿಸಿದ ದಾಖಲೆಗಳನ್ನು ಹಿಂಪಡೆಯುವ ಪೂರ್ಣ ಹಕ್ಕು ಅರ್ಜಿದಾರರು ಹೊಂದಿರಲಿದ್ದಾರೆ ಎಂದು ತಿಳಿಸಲಾಗಿದೆ. ವ್ಯವಹಾರವೇ ರದ್ದಾಗಿರುವಾಗ ಸಾರ್ವಜನಿಕರ ಹಣವನ್ನು ಇಟ್ಟುಕೊಳ್ಳುವ ಹಕ್ಕು ಸರ್ಕಾರಕ್ಕಿಲ್ಲ. ನಿಯಮಾವಳಿಗಳ ಪ್ರಕಾರ ನಕಲು ವೆಚ್ಚ ಹಾಗೂ ಅರ್ಧದಷ್ಟು ನೋಂದಣಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ಖರೀದಿದಾರನಿಗೆ ಹಿಂದಿರುಗಿಸಬೇಕು. ಉದ್ದೇಶಿತ ಆಸ್ತಿ ವ್ಯವಹಾರವು ಪೂರ್ಣಗೊಳ್ಳದೆ ಮಧ್ಯದಲ್ಲೇ ಕೈಬಿಡಲಾಗುತ್ತದೆಯೋ, ಆಗ ಸಾರ್ವಜನಿಕರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸುವುದು ಕಾನೂನಿನ ಆಶಯವಾಗಿದೆ. ಕರ್ನಾಟಕ ಮುದ್ರಾಂಕ ಕಾಯ್ದೆಯ ನಿಯಮಗಳ ಅಡಿಯಲ್ಲಿ ಅರ್ಜಿದಾರರ ಮರುಪಾವತಿ ಕೋರಿಕೆಯನ್ನು ಹೊಸದಾಗಿ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಬೆಳಗಾವಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಆದೇಶಿಸಿದೆ.