ಮಡಿಕೇರಿ, ಜು. ೭: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ೨೦೧೫ ಸೆಕ್ಷನ್ ೪೪ರ ಅನ್ವಯ ಸರ್ಕಾರಿ ಬಾಲಕ-ಬಾಲಕಿಯರ ಬಾಲಮಂದಿರ ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ಪುನರ್ವಸತಿಗೊಂಡು ದೀರ್ಘಾವಧಿಯವರೆಗೆ ಮಕ್ಕಳ ಪೋಷಕರು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡದಿರುವ ಹಾಗೂ ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆ ಮಾಡಲು ಸಾಧ್ಯವಾಗದ ಪೋಷಕರ ಮಕ್ಕಳನ್ನು ಹಾಗೆಯೇ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ೭ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವ ಪೋಷಕತ್ವ ಕಾರ್ಯಕ್ರಮಕ್ಕೆ ಅರ್ಹ ಸಾಕು ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪೋಷಕತ್ವ ಯೋಜನೆಯಡಿ ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ವಿಶೇಷಚೇತನ ಮಕ್ಕಳು, ಇನ್ನಿತರ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ, ಅಪಾಯದ ಅಂಚಿಗೆ ಸಿಲುಕಬಹುದಾದ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸುವ ಕಾರ್ಯಕ್ರಮವಾಗಿದೆ.

ಪೋಷಕತ್ವ ಅವಧಿಯು ೧ ವರ್ಷಕ್ಕಿಂತ ಒಳಗಿನ ಅಥವಾ ದೀರ್ಘಾವಧಿಯು ೧ ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅಥವಾ ಮಗುವಿಗೆ ೧೮ ವರ್ಷ ವಯಸ್ಸಾಗುವವರೆಗೆ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ. ಪೋಷಕತ್ವ ಕಾರ್ಯಕ್ರಮದಡಿಯಲ್ಲಿ ಪೋಷಕತ್ವ ಮಾರ್ಗಸೂಚಿಯಂತೆ ಪೋಷಣೆ ಮತ್ತು ರಕ್ಷಣೆಗೆ ದಾಖಲಾಗಿರುವ ೬ ರಿಂದ ೧೮ ವರ್ಷದ ಒಳಗಿನ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ನೋಡಿಕೊಳ್ಳಲು ಆಸಕ್ತಿಯಿರುವ ಪೋಷಕರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧. ದೂರವಾಣಿ ಸಂಖ್ಯೆ ೦೮೨೭೨-೨೨೮೮೦೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.