ಚೆಯ್ಯಂಡಾಣೆ, ಜು. ೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಚೇಲಾವರದಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಚೇಲಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯುತ್ತಿದ್ದಂತೆ ಪರ - ವಿರೋಧಗಳ ನಡುವೆ ಚರ್ಚೆ ಗೊಂದಲದ ಗೂಡಾಯಿತು.
ವೀರಾಜಪೇಟೆ ವಲಯದ ಅರಣ್ಯಧಿಕಾರಿ ಆರ್‌ಎಫ್‌ಓ ಶಿವರಾಮ್ ಮಾತನಾಡಿ, ಕಳೆದ ಐದಾರು ವರ್ಷಗಳ ಹಿಂದೆ ಪ್ರವಾಸಿಗರಿಗೆ ಎಪಿಸಿ ಕ್ಯಾಂಪ್ ಮೂಲಕ ಟಿಕೆಟ್ ವಿತರಿಸಿ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿರುವ ಬಗ್ಗೆ ಮಾಹಿತಿ ಬಂದಿದೆ. ಅದರ ಬಳಿಕ ಕಂದಾಯ ಇಲಾಖೆ ಹಾಗೂ ಗ್ರಾಮಸ್ಥರ ವಿರೋಧದ ನಡುವೆ ಎಪಿಸಿ ಕ್ಯಾಂಪ್ ರದ್ದುಪಡಿಸಲಾಗಿದೆ. ಈ ಹಿಂದೆ ಎಪಿಸಿ ಕ್ಯಾಂಪ್ ಇರುವಾಗ ನಮ್ಮ ಸಿಬ್ಬಂದಿಗಳು ಹಣ ಪಡೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ಕ್ಯಾಂಪನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಊರಿನ ಅಭಿವೃದ್ಧಿಗೆ ಗ್ರಾಮಸ್ಥರೆಲ್ಲರೂ ಕೈಜೋಡಿಸಬೇಕು. ಇಲ್ಲಿನ ಬೆಟ್ಟ ಹಾಗೂ ಜಲಪಾತ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡಿದೆ. ಐದು ಆರು ವರ್ಷಗಳ ಹಿಂದೆ ಪಂಚಾಯಿತಿಯಿAದ ಗೇಟ್ ನಿರ್ಮಿಸಿ ಹಣ ಪಡೆದು, ವಾಹನಗಳನ್ನು ತಪಾಸಣೆ ಮಾಡಿ, ಪ್ರವಾಸಿಗರ ಮಾಹಿತಿ ಪಡೆದು ಬಿಡುತ್ತಿದ್ದರು. ನಮ್ಮ ಊರು ಅಭಿವೃದ್ಧಿಯಾಗಬೇಕು. ಅದು ನಿಮ್ಮಿಂದ ಮಾತ್ರ ಸಾಧ್ಯ. ಇಲ್ಲಿಯ ಸ್ಥಳೀಯ ಸಂಘ-ಸAಸ್ಥೆಗಳು ಮುತುವರ್ಜಿ ವಹಿಸಿ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮುಂದೆ ಬರಬೇಕು ಎಂದರು. ಪ್ರವಾಸಿಗರ ನಿಯಂತ್ರಣಕ್ಕೆ ಚೆಯ್ಯಂಡಾಣೆಯಲ್ಲಿ ಗೇಟ್ ಆಳವಡಿಸಿ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಸಭೆಯಲ್ಲಿ ಒತ್ತಾಯಿಸಿದರು. ನಂತರ ಮಾತನಾಡಿದ ಅವರು, ತನ್ನ ಅವಧಿಯಲ್ಲಿ ಗೇಟ್ ಇರುವಾಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಣ ಕಲೆಕ್ಷನ್ ಮಾಡುತ್ತಿರಲಿಲ್ಲ. ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಬಿಡುತ್ತಿರಲಿಲ್ಲ. ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರ ಒತ್ತಾಯದ ಮೇರೆಗೆ ಗೇಟ್ ಅನ್ನು ತೆರವುಗೊಳಿಸಿದರು ಎಂದರು.
ನಾಪೋಕ್ಲು ಪೊಲೀಸ್ ಸಹಾಯಕ ಠಾಣಾಧಿಕಾರಿ ಫ್ರಾನ್ಸಿಸ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರ ವಾಹನಗಳನ್ನು ಗ್ರಾಮಸ್ಥರು ಹಾನಿಪಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾಮಸ್ಥರು ತಮಗೆ ಯಾವುದೇ ತೊಂದರೆಗಳಾದಲ್ಲಿ ಇಲಾಖೆಯ ಗಮನಕ್ಕೆ ತನ್ನಿ. ಪ್ರವಾಸಿಗರಿಂದ ತೊಂದರೆಗಳಾದಲ್ಲಿ ನಮ್ಮ ಗಮನಕ್ಕೆ ತನ್ನಿ ನಾವು ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ಪ್ರವಾಸಿಗರಿಂದ ತೊಂದರೆ ಆಗುತ್ತಿರುವ ಬಗ್ಗೆ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಗ್ರಾಮಸ್ಥರು ಈ ಹಿಂದೆಯೇ ದೂರನ್ನು ನೀಡಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈ ದಿನ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿದ್ದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅರಣ್ಯ ಇಲಾಖೆ ಕಟ್ಟಿದ ಕಟ್ಟಡಕ್ಕೆ ಗ್ರಾಮ ಪಂಚಾಯಿತಿ ವಿರುದ್ಧವಾಗಿ ಹೋಗಿಲ್ಲ, ಗ್ರಾಮಸ್ಥರೇ ಅದರ ವಿರುದ್ಧ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಆ ಕಟ್ಟಡ ಬಿಟ್ಟು ಕೊಡಲು ಸಾಧ್ಯವಿಲ್ಲ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಮಾತ್ರ ಬಿಟ್ಟು ಕೊಡಲು ಸಾಧ್ಯ ಎಂದರು.
ಗ್ರಾಮಸ್ಥರಾದ ನಡಿಕೇರಿಯಂಡ ದಿಲೀಪ್ ಮಾತನಾಡಿ, ಕಬ್ಬೆಬೆಟ್ಟ ಹಾಗೂ ಚೇಲಾವರ ಜಲಪಾತ ಪ್ರವಾಸೋದ್ಯಮಕ್ಕೆ ಒಳಪಟ್ಟಿದೆ ಇಲ್ಲಿ ಶೌಚಾಲಯ ಬೇಕು, ಊರಿನವರಿಗೆ ನೆಮ್ಮದಿ ಬೇಕು, ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ, ಪಾರ್ಕಿಂಗ್‌ಗಳಿಗೆ ಹಣ ಸಂಗ್ರಹಿಸಿ ಗೇಟ್ ಅಳವಡಿಸಿ ತಪಾಸಣೆ ನಡೆಸಿ ಮಾಹಿತಿ ಪಡೆದು ವೀಕ್ಷಣೆಗೆ ಅವಕಾಶ ನೀಡಿ. ಆದರೆ ಮಾತ್ರ ಪ್ರವಾಸಿಗರ ನಿಯಂತ್ರಣವಾಗಲಿದೆ. ಕೆಲವು ಪ್ರವಾಸಿಗರು ಮಧ್ಯರಾತ್ರಿ ತಮ್ಮ ವಾಹನಗಳಲ್ಲೆ ನಿದ್ರೆ ಮಾಡುತ್ತಿರುತ್ತಾರೆ. ಇಂತವರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ನಮಗೆ ನೆಮ್ಮದಿಯಾಗಿ ಜೀವಿಸಲು ಇಲ್ಲಿನ ಪ್ರವಾಸೋದ್ಯಮ ಬಂದ್ ಮಾಡಿ, ಗೇಟ್ ನಿರ್ಮಿಸಿ ಯಾವುದೇ ಪ್ರಯೋಜನವಿಲ್ಲ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುತ್ತದೆ ಎಂದು ಸ್ಥಳೀಯ ನಿವಾಸಿ ಕೆ.ಬಿ. ತಮ್ಮಯ್ಯ ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಈರಪ್ಪ, ಪವನ್, ಪಟ್ಟಚೆರುವಂಡ ಪ್ರತಾಪ್, ಸುರೇಶ್ ಕೆ.ಆರ್., ಪ್ರಗತಿಪರ ಕೃಷಿಕ ನಂದ ಕುಮಾರ್, ಲೋಕೇಶ್ ಮತ್ತಿತರರು ಗ್ರಾಮಸ್ಥರ ಪರವಾಗಿ ಮಾತನಾಡಿ, ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪ್ರವಾಸಿಗರು ಬೆಳಿಗ್ಗೆ ೬ ಗಂಟೆಯಿAದ ಮಧ್ಯರಾತ್ರಿವರೆಗೆ ಇಲ್ಲೇ ಇರುತ್ತಾರೆ. ರಸ್ತೆಯ ಬದಿಗಳಲ್ಲಿ ಮ್ಯೂಸಿಕ್ ಹಾಕಿ ಸ್ಥಳೀಯರಿಗೆ ತೊಂದರೆ ಕೊಡುತ್ತಿರುತ್ತಾರೆ. ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಬೆಟ್ಟಕ್ಕೆ ತೆರಳುತ್ತಾರೆ. ಪ್ರವಾಸಿಗರಿಗೆ ಸಮಯ ನಿಗದಿಪಡಿಸಿ, ಇಲ್ಲಿ ಕೊಡಗಿನ ಪ್ರವಾಸಿಗರೇ ಹೆಚ್ಚಾಗಿ ಬಂದು ಗಲಾಟೆ ಮಾಡುತ್ತಾರೆ. ಪಾರ್ಟಿ ಮೋಜು ಮಾಡಿ ಬಾಟಲಿಗಳನ್ನು ಅಲ್ಲಿ-ಇಲ್ಲಿ ಬಿಸಾಡಿ ತೆರಳುತ್ತಾರೆ. ಈ ಸಭೆಯಲ್ಲಿ ಒಬ್ಬೊಬ್ಬರ ಅಭಿಪ್ರಾಯವನ್ನು ಮನಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಮುಂದಿನ ಜುಲೈ ೧೫ ರ ಒಳಗೆ ಗ್ರಾಮಸ್ಥರು ಸೂಕ್ತ ನಿರ್ಧಾರ ಕೈಗೊಂಡು ಗ್ರಾಮ ಪಂಚಾಯಿತಿಯೊAದಿಗೆ ಸಹಕರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ವೀರಾಜಪೇಟೆ ಅರಣ್ಯ ಇಲಾಖೆಯ ಡಿಆರ್‌ಎಫ್‌ಓ ಶ್ರೀನಿವಾಸ್, ನಾಪೋಕ್ಲು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಮಾಜಿ ಸದಸ್ಯರುಗಳು, ಗ್ರಾಮಸ್ಥರು, ಸಂಘ-ಸAಸ್ಥೆಯ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಸಿಬ್ಬಂದಿ ದಿನೇಶ್ ಕುಮಾರ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ವಂದಿಸಿದರು.
- ಅಶ್ರಫ್