ಚೆಯ್ಯಂಡಾಣೆ, ಜು. ೬ : ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರೆದಿದೆ, ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಸ್ಪಿಂಕರ್ ಪೈಪ್, ಕಾಫಿ, ಅಡಿಕೆ, ಬಾಳೆ, ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿವೆ.ಮರಂದೋಡ ಗ್ರಾಮದ ಮಾರ್ಚಂಡ ವಿಜಯ್ ಹಾಗೂ ಕುಟುಂಬಸ್ಥರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ೧೪ಕ್ಕೂ ಅಧಿಕ ಸ್ಪಿಂಕ್ಲರ್ ಪೈಪ್, ಕಾಫಿ, ಅಡಿಕೆ, ಬಾಳೆ ಹಾಗೂ ಮತ್ತಿತರರ ಗಿಡಗಳನ್ನು ತುಳಿದು ನಾಶಪಡಿಸಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕಾಡಾನೆ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಈ ವ್ಯಾಪ್ತಿಯಲ್ಲಿ ರೈತರು ಜೀವ ಭಯದಲ್ಲೇ ತೋಟಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯು ಕಾಡಾನೆಗಳು ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಹಾಗೂ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ವಿಜಯ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. - ಅಶ್ರಫ್